Breaking News

ಕೋಳಿ ಮಾಂಸ ನಿಜಕ್ಕೂ ಆರೋಗ್ಯಕರವೇ, ನಿತ್ಯದ ಆಹಾರವಾಗಬಾರದು ಯಾಕೆ ಗೊತ್ತಾ?

Share News

ಮಾಂಸಾಹಾರಿಗಳಿಗೆ ಅತಿಪ್ರಿಯ ಖಾದ್ಯವೆಂದರೆ ಕೋಳಿಮಾಂಸದ ಪದಾರ್ಥ. ಕೋಳಿ ಮಾಂಸ ಬರೆಯ ಭಾರತದಲ್ಲಲ್ಲ, ಇಡಿಯ ವಿಶ್ವದಲ್ಲಿಯೇ ಅತ್ಯಂತ ಹೆಚ್ಚಾಗಿ ಬಳಸಲ್ಪಡುವ ಆಹಾರ, ಸರಿಸುಮಾರು ಗೋಧಿ ಮತ್ತು ಅಕ್ಕಿಯ ಬಳಿಕದ ಸ್ಥಾನ.ನಮ್ಮೆಲ್ಲರಲ್ಲಿಯೂ ಸ್ವಾಭಾವಿಕವಾಗಿ ಅಡಗಿರುವ ಗುಣವೊಂದಿದೆ. ಯಾವುದಾದರೂ ಆಹಾರ ಇಷ್ಟವಾದರೆ, ಇನ್ನಷ್ಟು ಹೆಚ್ಚು ಹಾಕಿಸಿಕೊಂಡು ತಿನ್ನುವುದು, ಇದನ್ನೇ ಕನ್ನಡದಲ್ಲಿ ಜಿಹ್ವಾಚಾಪಲ್ಯ ಎಂದು ಕರೆಯುತ್ತಾರೆ. ಜಿಹ್ವೆ ಎಂದರೆ ನಾಲಿಗೆ, ಚಾಪಲ್ಯ ಎಂದರೆ ಚಪಲ. ನಾಲಿಗೆಗೆ ಯಾವುದು ರುಚಿಸಿತೋ, ಆ ಅಹಾರಗಳು, ಅನಾರೋಗ್ಯಕರವಾಗಿದ್ದರೂ ಸರಿ, ನಾವು ಲೆಕ್ಕಿಸುವುದಿಲ್ಲ. ಸಿಹಿತಿಂಡಿಗಳು ಇದಕ್ಕೆ ಜ್ವಲಂತ ಉದಾಹರಣೆ. ಕೋಳಿ ಮಾಂಸ ಈ ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ಸೇವಿಸಲ್ಪಡುವ ಮಾಂಸಾಹಾರವಾಗಿದೆ.

ಕೋಳಿಯ ಮಾಂಸದ ಬೆಳವಣಿಗೆ ಧಿಡೀರನೇ ಏರಲು ಕೋಳಿಗಳು ತಿನ್ನುವ ಖಾದ್ಯದಿಂದ ಹಿಡಿದು ಕುಡಿಸುವ ನೀರಿನಲ್ಲಿ ಕೃತಕ ರಾಸಾಯನಿಕಗಳನ್ನು ಸೇರಿಸಿ, ಫಾರಮ್ಮಿನ ತಾಪಮಾನ ಮೊದಲಾದವುಗಳನ್ನು ಮಾರ್ಪಾಡಿಸಿ ಒಂದು ಮಾಂಸದ ಮುದ್ದೆ ತಯಾರಾಗುವಂತೆ ಮಾಡಲಾಗುತ್ತದೆ. ತಿನ್ನಲು ರುಚಿಯಾಗಿರುವ ಈ ಮಾಂಸ ನಿಜಕ್ಕೂ ಆರೋಗ್ಯಕರವೇ?

ಈ ಮಾಂಸಕ್ಕಾಗಿ ವಿಶ್ವದಾದ್ಯಂತ ನಿತ್ಯವೂ 13.6 ಕೋಟಿ (13,60,00,000) ಕೋಳಿಗಳನ್ನು ಕೊಲ್ಲಲಾಗುತ್ತದೆ. ಇದು ಅತಿ ಪೌಷ್ಟಿಕ, ಆರೋಗ್ಯಕರ, ಸುರಕ್ಷಿತ ಹಾಗೂ ರುಚಿಕರ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.ಕೋಳಿ ಮಾಂಸವನ್ನು ನಿತ್ಯವೂ ಸೇವಿಸುವ ಜನರಿದ್ದಾರೆ. ಕೋಳಿ ಮಾಂಸ ಸಸ್ಯಾಹಾರದ ಆಲೂಗಡ್ಡೆ ಇದ್ದಂತೆ ಆಲೂಗಡ್ಡೆಯೊಂದಿಗೆ ಬೇರೆ ತರಕಾರಿಗಳನ್ನು ಜೊತೆಯಾಗಿಸಿ ಮಾಡಬಹುದಾದ ಹಲವಾರು ಖಾದ್ಯಗಳಿವೆ. ಅಂತೆಯೇ ಕೋಳಿ ಮಾಂಸದಿಂದ ತಯಾರಿಸಬಹುದಾದ ಖಾದ್ಯಗಳ ಸಂಖ್ಯೆಯೂ ನೂರಾರಿವೆ. ಈ ಮಾಂಸ ಸುಲಭವಾಗಿ ಬೇಯಲ್ಪಡುತ್ತದೆ, ಹುರಿಯಲ್ಪಡುತ್ತದೆ ಅಥವಾ ಇತರ ಆಹಾರಗಳೊಂದಿಗೆ ಬೆರೆಯುತ್ತದೆ ಮತ್ತು ಮಸಾಲೆಗಳನ್ನು ಹೀರಿಕೊಳ್ಳುತ್ತದೆ.

ಅಷ್ಟೇ ಅಲ್ಲ, ಇದರಲ್ಲಿ ಕೆಂಪು ಮಾಂಸದಲ್ಲಿರುವಂತಹ ಅಪಾಯಕಾರಿ ಕೊಬ್ಬುಗಳು ಇಲ್ಲ ಹಾಗೂ ಇದರಲ್ಲಿರುವ ಬಹುತೇಕ ಅಂಶ ಪ್ರೋಟೀನ್ ಆಗಿದ್ದು ನಮ್ಮ ಸ್ನಾಯುಗಳನ್ನು ಬೆಳೆಸಲು ಹಾಗೂ ಇತರ ಜೀವ ರಾಸಾಯನಿಕ ಕ್ರಿಯೆಗಳು ಉತ್ತಮಗೊಳ್ಳಲು ನೆರವಾಗುತ್ತವೆ. ಆದರೆ, ಈ ಮಾಂಸವನ್ನು ನಾವು ನಿತ್ಯವೂ ಸೇವಿಸದಿರುವಂತೆ ತಜ್ಞರು ಸಲಹೆ ಮಾಡುತ್ತಾರೆ.

ಒಂದು ವೇಳೆ ಒಂದು ಗುಂಪಿನ ಯಾವುದೋ ಒಂದು ಕೋಳಿಗೆ ಕಾಯಿಲೆಯಾಗಿರುವ ಗುಮಾನಿಬಂದರೆ ಇಡಿಯ ದಳವನ್ನೇ ಪ್ರತ್ಯೇಕಿಸಿ ಪರೀಕ್ಷಿಸಲಾಗುತ್ತದೆ. ಈ ಕೋಳಿಗಳನ್ನು ತಿನ್ನುವುದರಿಂದ ಶೇಖಡಾ ೦.೧ರಷ್ಟು ಮಾನವರಿಗೆ ಹಾನಿಯಾಗಬಹುದು ಎಂದು ಗೊತ್ತಾದರೂ ಇಡಿಯ ದಳವನ್ನೇ ತ್ಯಜಿಸಲಾಗುತ್ತದೆ. ಈ ಕಾರಣದಿಂದ ಮಾರುಕಟ್ಟೆಯಲ್ಲಿ ಆಗಮಿಸುವ ಈ ಕೋಳಿಮಾಂಸವನ್ನು ಯಾವುದೇ ತೊಂದರೆ ಇಲ್ಲದೆ ಸೇವಿಸಬಹುದು ಎಂದು ಪರಿಣಿತರು ವಿವರಿಸುತ್ತಾರೆ
ಸಸ್ಯಾಹಾರ ಹಾಗೂ ಮಾಂಸಾಹಾರ ಮಿಶ್ರಣದ ಅಗತ್
ನಿಜವಾದ ತೊಂದರೆ ಕೋಳಿ ಮಾಂಸವನ್ನು ತಿನ್ನುವುದರಲ್ಲಲ್ಲ, ತಿನ್ನುವ ಪ್ರಮಾಣದಲ್ಲಿದೆ. ಏಕೆಂದರೆ ಆಹಾರತಜ್ಞರ ಪ್ರಕಾರ ನಮಗೆ ಅಗತ್ಯವಿರುವ ಪ್ರೋಟೀನು ಸುಮಾರು ನೂರು ಗ್ರಾಂ ಕೋಳಿ ಮಾಂಸದಿಂದ ಲಭ್ಯವಾಗಿಬಿಡುತ್ತದೆ. ಅದಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದ ಪ್ರೋಟೀನು ಕೊಬ್ಬಾಗಿ ಪರಿವರ್ತನೆಗೊಂಡು ದೇಹದಲ್ಲಿ ಶೇಖರವಾಗುತ್ತದೆ. ರುಚಿ ಇದೆ ಎಂದು ನಾವು ನಾಲ್ಕಾರು ತುಂಡುಗಳನ್ನು ತಿನ್ನುವುದರಿಂದ ದಿನದ ಮಿತಿಯನ್ನು ದಾಟಿಬಿಡುತ್ತೇವೆ. ಇದೇ ನಮ್ಮ ಆರೋಗ್ಯಕ್ಕೆ ಮಾರಕವಾಗಿದೆ.
ಇದಕ್ಕೆ ಮೂಲ ಕಾರಣ, ನಿಸರ್ಗ ನಮ್ಮ ದೇಹವನ್ನು ರಚಿಸಿರುವ ರೀತಿ. ನಾವು ಮಿಶ್ರಾಹಾರಿಗಳು, ಅಂದರೆ ಅತ್ತ ಸಸ್ಯಾಹಾರಿಗಳೂ ಅಲ್ಲದ, ಇತ್ತ ಪೂರ್ಣ ಮಾಂಸಾಹಾರಿಗಳೂ ಅಲ್ಲದ ಜೀವಿಗಳು. ನಾವು ಸಸ್ಯಾಹಾರವನ್ನೂ ಬೇಯಿಸದೇ ಜೀರ್ಣಿಸಿಕೊಳ್ಳಲಾರೆವು ಅಥವಾ ಮಾಂಸವನ್ನೂ ಹಸಿಯಾಗಿ ಜೀರ್ಣಿಸಿಕೊಳ್ಳಲಾರೆವು.
ಇದೇ ಕಾರಣಕ್ಕೆ ನಮಗೆ ಇವೆರಡರ ನಡುವಣ ಅಥವಾ ಇವೆರಡರ ಮಿಶ್ರಣದ ಅಗತ್ಯವಿದೆ. ವಾಸ್ತವದಲ್ಲಿ, ನಮ್ಮ ಜೀರ್ಣಾಂಗಗಳನ್ನು ಸಸ್ಯಾಹಾರಿ ಮತ್ತು ಮಾಂಸಾಹಾರಿ ಪ್ರಾಣಿಗಳ ಜೀರ್ಣಾಂಗಗಳಿಗೆ ಹೋಲಿಸಿದರೆ, ವಿಶೇಷವಾಗಿ ನಮ್ಮ ಕರುಳಿನ ಉದ್ದ, ಇವೆರಡರ ನಡುವೆ ಬರುತ್ತದೆ. ಆದರೆ, ಹೋಲಿಕೆಯಲ್ಲಿ ನಟ್ಟ ನಡುವೆ ಇರುವುದಿಲ್ಲ, ಬದಲಿಗೆ ನಾವು ಹೆಚ್ಚಾಗಿ ಸಸ್ಯಾಹಾರಿ ಪ್ರಾಣಿಗಳ ಜೀರ್ಣಾಂಗಗಳಿಗೆ ಹತ್ತಿರವಾಗಿದ್ದೇವೆ. ಇದೇ ಕಾರಣಕ್ಕೆ ನಾವು ಮಾಂಸಾಹಾರವನ್ನು ನಿತ್ಯವೂ ಸೇವಿಸಲು ಸಾಧ್ಯವಿಲ್ಲ.ಆದರೆ, ಸಸ್ಯಾಹಾರವನ್ನು ನಿತ್ಯವೂ ಸೇವಿಸಬಹುದು ಹಾಗೂ ಮಾಂಸವನ್ನೇ ಸೇವಿಸದೇ ಬರೆಯ ಸಸ್ಯಾಹಾರಿಗಳಾಗಿಯೂ ಜೀವಿಸಬಹುದು! ನಿಸರ್ಗದ ಈ ನಿಯಮ ಅರ್ಥವಾದರೆ ಉಳಿದ ವಿಷಯಗಳೆಲ್ಲಾ ಸುಲಭವಾಗಿ ಅರ್ಥವಾದಂತೆ. ನಿತ್ಯವೂ ಮಾಂಸ ಸೇವಿಸುವ ವ್ಯಕ್ತಿಗಳಿಗೆ ಸ್ಥೂಲಕಾಯ, ಹೃದಯ ಸಂಬಂಧಿ ತೊಂದರೆಗಳು ಹಾಗೂ ವಿಷಾಹಾರ ಸೇವನೆಯ ಅಪಾಯವೂ ಇತರರಿಗಿಂತ ಹೆಚ್ಚೇ ಇರುತ್ತದೆ.

ಪ್ರೋಟೀನಿನ ಖನಿಜವಾಗಿರುವ ಕೋಳಿಮಾಂಸ

ನಮ್ಮ ದೇಹಕ್ಕೆ ಅಗತ್ಯವಾದ ಪ್ರೋಟೀನುಗಳು ಕೋಳಿ ಮಾಂಸದಲ್ಲಿ ಹೆಚ್ಚಿನ ಪ್ರಮಾಣದಲ್ಲಿವೆ. ಅಲ್ಲದೇ ಇದು ಸುಲಭವಾಗಿ ಜೀರ್ಣವಾಗುತ್ತದೆ. ಇದರೊಂದಿಗೆ ಹಲವು ಅಮೈನೋ ಆಮ್ಲಗಳು ಸಹಾ ಇವೆ. ಇವು ದೇಹಕ್ಕೆ ಹೆಚ್ಚಿನ ಶಕ್ತಿ ಹಾಗೂ ಪೋಷಕಾಂಶಗಳನ್ನು ನೀಡುತ್ತವೆ. ಪೋಷಕಾಂಶಗಳ ಕೊರತೆಯಿಂದ ದೇಹ ಬಳಲಿದ್ದರೆ ಶೀಘ್ರವೇ ಪುನಃಶ್ಚೇತನಗೊಳ್ಳುತ್ತದೆ.

ನಾವು ಸಸ್ಯಜನ್ಯ ಪ್ರೋಟೀನ್ ಗಿಂತಲೂ ಪ್ರಾಣಿಜನ್ಯ ಪ್ರೋಟೀನನ್ನು ಸುಲಭವಾಗಿ ಜೀರ್ಣಿಸಿಕೊಳ್ಳುತ್ತೇವೆ. ನಮ್ಮ ಆಹಾರದಲ್ಲಿ ಒಟ್ಟಾರೆ ಸಿಗುವ ಕ್ಯಾಲೋರಿಗಳಲ್ಲಿ ಹತ್ತರಿಂದ ಮೂವತ್ತೈದು ಶೇಖಡಾ ಪ್ರೋಟೀನ್ ಇರಬೇಕು. ಇದಕ್ಕೂ ಹೆಚ್ಚಿನ ಪ್ರಮಾಣದ ಪ್ರೋಟೀನ್ ಆಹಾರದ ಮೂಲಕ ಲಭ್ಯವಾದರೆ ದೇಹದ ಇದನ್ನು ನಾಳೆಗಾಗಿ ಕೊಬ್ಬಿನ ರೂಪದಲ್ಲಿ ಸಂಗ್ರಹಿಸಿಡುತ್ತದೆ.

ಅಂದರೆ, ಹೆಚ್ಚುವರಿ ಪ್ರೋಟೀನ್ ತಿಂದಷ್ಟೂ ಕೊಬ್ಬು ಸಂಗ್ರಹಗೊಂಡು ಸ್ಥೂಲದೇಹಿಗಳಾಗುವ ಸಾಧ್ಯತೆಯೂ ಹೆಚ್ಚು. ಸ್ಥೂಲಕಾಯ ಎಂದರೆ ರಕ್ತದಲ್ಲಿ ಲಿಪಿಡ್ ಗಳ ಮಟ್ಟದಲ್ಲಿ ಹೆಚ್ಚಳ! ಕೋಳಿ ಮಾಂಸ ಬಹುತೇಕ ಪ್ರೋಟೀನ್ ಆಗಿದೆ. ಒಂದು ದೊಡ್ಡ ತುಂಡು ಕೋಳಿ ಮಾಂಸದಿಂದಲೇ ನಮಗೆ ಅಗತ್ಯವಿರುವುದಕ್ಕಿಂತಲೂ ಹೆಚ್ಚಿನ ಪ್ರಮಾಣದ ಪ್ರೋಟೀನ್ ಸಿಗುತ್ತದೆ.

ಲೆಕ್ಕಾಚಾರದ ಪ್ರಕಾರ ದೇಹದ ತೂಕಕ್ಕೆ ಅನುಗುಣವಾಗಿ 0.8 ಗ್ರಾಂ ಪ್ರೋಟೀನ್ ನಮಗೆ ಅಗತ್ಯವಿದೆ. ಸುಮಾರು ಎಪ್ಪತ್ತು ಕೇಜಿ ತೂಕದ ವ್ಯಕ್ತಿಗೆ ದಿನವೊಂದಕ್ಕೆ ಐವತ್ತಾರು ಗ್ರಾಂ ಪ್ರೋಟೀನ್ ಬೇಕು. ನೂರು ಗ್ರಾಂ ಕೋಳಿ ಮಾಂಸದಲ್ಲಿ 27 ಗ್ರಾಂ ಪ್ರೋಟೀನ್ ಇದೆ. ಅಂದರೆ ಸುಮಾರು ಇನ್ನೂರು ಗ್ರಾಂ ಕೋಳಿ ಮಾಂಸ ತಿನ್ನಬಹುದು ಅಷ್ಟೇ. ಆದರೆ ಈ ಪ್ರೋಟೀನ್ ವಿಶೇಷವಾಗಿ ಧಾನ್ಯಗಳು ಹಾಗೂ ಹಾಲು ಮೊದಲಾದ ಆಹಾರಗಳಿಂದ ಬೇರೆ ರೂಪದಲ್ಲಿಯೂ ಸಿಗುವ ಕಾರಣ ಪ್ರೋಟೀನ್ ಪ್ರಮಾಣವನ್ನು ಕೇವಲ ಕೋಳಿ ಮಾಂಸವೊಂದರಿಂದಲೇ ಅಳೆಯಲು ಸಾಧ್ಯವಿಲ್ಲ.

ಆ ಪ್ರಕಾರ, ದಿನವೊಂದಕ್ಕೆ ಕೇವಲ ನೂರು ಗ್ರಾಂ ಕೋಳಿ ಮಾಂಸ ಸೇವಿಸಿದರೆ ಬೇಕಾದಷ್ಟಾಗುತ್ತದೆ. ಆದರೆ ಈ ರುಚಿಗೆ ಮಾರುಹೋದವರು ತೂಕ ಮಾಡಿ ಕೇವಲ ನೂರು ಗ್ರಾಂ ಮಾತ್ರವೇ ತಿನ್ನುತ್ತಾರೆ ಎನ್ನಲು ಸಾಧ್ಯವೇ ಇಲ್ಲ. ಹಾಗಾಗಿ, ಈ ಮಾಂಸವನ್ನು ವಾರಕ್ಕೊಮ್ಮೆ ಅಥವಾ ಎರಡು ಬಾರಿ ಮಾತ್ರವೇ ಸೇವಿಸಿದರೆ ಸಾಕು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

ಮನಸ್ಸನ್ನು ನಿರಾಳವಾಗಿರಿಸಲು ಸಹಕರಿಸುತ್ತದೆ

ದೈಹಿಕ ಚಟುವಟಿಕೆಗೆ ಹೆಚ್ಚಿನ ಪ್ರೋಟೀನಿನ ಅಗತ್ಯವಿದೆ. ಸಾಮಾನ್ಯವಾಗಿ ಆಟೋಟಗಳ ಮೂಲಕ ಮನಸ್ಸು ಮುದಗೊಳ್ಳುತ್ತದೆ. ಈ ಆಟೋಟಗಳಿಗೆ ಕೋಳಿಮಾಂಸದ ಸೇವನೆ ಹೆಚ್ಚಿನ ಶಕ್ತಿಯನ್ನು ನೀಡಿ ಆಯಾಸವನ್ನು ಪರಿಹರಿಸುತ್ತದೆ. ಮನಸ್ಸನ್ನು ಶಾಂತವಾಗಿರಿಸಿ ಯಾವುದೇ ಸಂದರ್ಭದಲ್ಲಿ ಮನಸ್ಸಿನ ಮೇಲೆ ನಿಯಂತ್ರಣ ಪಡೆಯಲು ನೆರವಾಗುತ್ತದೆ.

​ಕೋಳಿ ಮಾಂಸ ಅಧಿಕವಾದರೆ ಹೃದಯ ಸಂಬಂಧಿ ಕಾಯಿಲೆಗಳು ಆವರಿಸುವ ಸಾಧ್ಯತೆಯೂ ಹೆಚ್ಚು

ಅತಿ ಹೆಚ್ಚಿನ ಕೋಳಿ ಮಾಂಸದ ಸೇವನೆಯಿಂದ ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟಗಳೂ ಹೆಚ್ಚುತ್ತವೆ. ಇವು ಹೃದಯ ಸಂಬಂಧಿ ರೋಗಗಳೊಂದಿಗೆ ನಿಕಟ ಸಂಬಂಧ ಹೊಂದಿವೆ. ಆದ್ದರಿಂದ ಕೋಳಿ ಮಾಂಸದ ಸಹಿತ, ಯಾವುದೇ ಅತಿ ಪ್ರೋಟೀನ್ ಸಮೃದ್ಧ ಆಹಾರವನ್ನು ಸೇವಿಸಿದರೂ ಇದು ಪರೋಕ್ಷವಾಗಿ ಹೃದಯ ಸಂಬಂಧಿ ಕಾಯಿಲೆಗಳು ಆವರಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ಈ ಕಾಯಿಲೆಗಳು ಮಾರಣಾಂತಿಕವೂ ಆಗಬಹುದು.

ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗಿದೆ
ಚಿಕ್ಕ ವಯಸ್ಸಿನಿಂದಲೇ ಕೋಳಿಮಾಂಸವನ್ನು ಸೇವಿಸುತ್ತಾ ಬರುವುದರಿಂದ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯಲ್ಲಿ ಗಮನಾರ್ಹ ಬದಲಾವಣೆ ಕಂಡುಬರುತ್ತದೆ. ಅಲ್ಲದೇ ಮೂಳೆಗಳನ್ನೂ ಗಟ್ಟಿಯಾಗಿಸುತ್ತದೆ. ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಆರೋಗ್ಯವನ್ನು ಕಾಪಾಡುತ್ತದೆ. ಅಲ್ಲದೇ ನಿಯಮಿತ ಪ್ರಮಾಣದಲ್ಲಿ ಸೇವಿಸುವುದರಿಂದ ಹೃದಯದ ಕಾರ್ಯವೂ ಸುಗಮಗೊಂಡು ಆರೋಗ್ಯ ಉತ್ತಮಗೊಳ್ಳುತ್ತದೆ.
ತೂಕ ನಿರ್ವಹಿಸಲು ತುಂಬಾ ಕಷ್ಟಕರವಾಗುತ್ತದೆ

ಪ್ರಾಣಿಜನ್ಯ ಪ್ರೋಟೀನ್ ಅನ್ನು ನಮ್ಮ ದೇಹ ಅತಿ ಸುಲಭವಾಗಿ ಜೀರ್ಣಿಸಿಕೊಳ್ಳುವ ಕಾರಣ, ಇದಕ್ಕಾಗಿ ಸಂಗ್ರಹಿಸಿಟ್ಟ ಕೊಬ್ಬನ್ನು ಬಳಸಬೇಕಾದ ಅಗತ್ಯತೆಯೇ ಎದುರಾಗುವುದಿಲ್ಲ. ಹಾಗಾಗಿ, ಈ ಕೊಬ್ಬು ಬಳಸಲ್ಪಡದೇ ಹೋಗುತ್ತದೆ ಹಾಗೂ ಇನ್ನಷ್ಟು ಹೆಚ್ಚಿನ ಸಂಗ್ರಹಕ್ಕೆ ಕಾರಣವಾಗುತ್ತದೆ. ತೂಕ ಇಳಿಕೆಗೆ ಕೊಬ್ಬಿನ ಬಳಕೆ ಅತಿ ಅಗತ್ಯ. ಈ ಕೊಬ್ಬು ಕರಗದೇ ಇದ್ದರೆ ತೂಕ ಇಳಿಯುವುದಾದರೂ ಹೇಗೆ? ಇದೇ ಕಾರಣಕ್ಕೆ ಸಸ್ಯಾಹಾರಿಗಳು ಮಿಶ್ರಾಹಾರಿಗಳು ಹಾಗೂ ಮಾಂಸಾಹಾರವನ್ನು ಅತಿ ಅಪರೂಪಕ್ಕೆ ಸೇವಿಸುವ ವ್ಯಕ್ತಿಗಳ ದೇಹದ ತೂಕ ಆರೋಗ್ಯಕರ ಮಿತಿಗಳಲ್ಲೇ ಇರುತ್ತದೆ.ಪರ್ಯಾಯವಾಗಿ, ಸೇವಿಸಿದ ಕೋಳಿಮಾಂಸದಿಂದ ಪಡೆದ ಶಕ್ತಿಯನ್ನು ಕಠಿಣ ವ್ಯಾಯಾಮ ಮತ್ತು ಶ್ರಮದಾಯಕ ಕೆಲಸಗಳಿಗೆ ಬಳಸಿಕೊಂಡಿದ್ದೇ ಆದಲ್ಲಿ, ಕೋಳಿ ಮಾಂಸಕ್ಕಿಂತ ಉತ್ತಮ ಆಹಾರ ಇನ್ನೊಂದಿಲ್ಲ. ಇದರಿಂದ ಸ್ನಾಯುಗಳು ಹುರಿಗಟ್ಟಲು ಸಾಧ್ಯವಾಗುತ್ತದೆ. ಆದರೂ ವ್ಯಾಯಾಮಕ್ಕಾಗಿ ಎಂದೇ ಕೋಳಿಮಾಂಸವನ್ನು ನಿತ್ಯವೂ ಸೇವಿಸಬಾರದು.

ಸ್ನಾಯುಗಳ ಬೆಳವಣಿಗೆಗೆ ಸಹಕರಿಸುತ್ತದೆ

ಉತ್ತಮ ಹುರಿಕಟ್ಟಿನ ಸ್ನಾಯುಗಳಿಗೆ ವ್ಯಾಯಾಮದ ಜೊತೆ ಉತ್ತಮ ಆಹಾರವೂ ಅವಶ್ಯವಾಗಿದೆ. ಕೋಳಿಮಾಂಸದ ಸೇವನೆಯಿಂದ ಸ್ನಾಯುಗಳು ಬೇಗನೇ ಹುರಿಗಟ್ಟುತ್ತವೆ. ಈ ಸ್ನಾಯುಗಳು ಸದೃಢವಾಗಿ, ಆರೋಗ್ಯಕರವಾಗಿದ್ದು ದೇಹಕ್ಕೆ ಆಕರ್ಷಕ ರೂಪ ನೀಡುತ್ತವೆ ಮತ್ತು ತನ್ಮೂಲಕ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ.

ಕೋಳಿಮಾಂಸದ ಹಾನಿಕಾರಕ ಗುಣಗಳು:
ವಾಸ್ತವವಾಗಿ ಹಾನಿಯಾಗುವುದು ಮಾಂಸದ ಸೇವೆನೆಯಿಂದ ಅಲ್ಲ, ಇದಕ್ಕೆ ಸಂಬಂಧಿಸಿದ ಇತರ ಗುಣಗಳಿಂದ. ಅಂದರೆ ಸರಿಯಾಗಿ ತೊಳೆಯದೇ ಇರುವುದು, ಪೂರ್ಣವಾಗಿ ಬೇಯುವ ಮೊದಲೇ ರುಚಿ ನೋಡುವುದು, ತಯಾರಿಕೆಯ ಸಮಯದಲ್ಲಿ ಶುದ್ಧತೆಯನ್ನು ಕಾಪಾಡದೇ ಇರುವುದು, ಖಾದ್ಯದ ತಯಾರಿಕೆಯ ವೇಳೆ ಕೀಟಗಳು ಬಂದು ಬೀಳುವುದು ಮೊದಲಾದವು. ನಿಜವಾದ ಹಾನಿಕಾರಕ ಅಂಶವೆಂದರೆ ಕೋಳಿಮಾಂಸದಲ್ಲಿರುವ ಹೆಚ್ಚಿನ ನಾರು. ಇದರಿಂದಾಗಿ ಹೊಟ್ಟೆಯಲ್ಲಿ ಜೀರ್ಣವಾಗಲು ಹೆಚ್ಚಿನ ಸಮಯ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಹೊಟ್ಟೆಯ ಜೀರ್ಣರಸಗಳನ್ನು ಉಪಯೋಗಿಸಬೇಕಾಗಿ ಬರುತ್ತದೆ. ಇದಕ್ಕಾಗಿ ಆಹಾರತಜ್ಞರು ಎಂಟು ವಾರಕ್ಕಿಂತ ಹೆಚ್ಚು ವಯಸ್ಸಿನ ಕೋಳಿಗಳನ್ನು ತಿನ್ನದಿರಲು ಸಲಹೆ ನೀಡುತ್ತಾರೆ. ಎಂಟು ವಾರಗಳ ಬಳಿಕ ಈ ಮಾಂಸದಲ್ಲಿ ನಾರು ಹೆಚ್ಚುತ್ತಾ ಹೋಗುತ್ತದೆ. ಇದೇ ಕಾರಣದಿಂದ ನಾಟಿ ಕೋಳಿಗಳಲ್ಲಿ ತುಂಬಾ ದೊಡ್ಡದಾಗಿರುವ ಹುಂಜದ ಮಾಂಸ ರಬ್ಬರಿನ ಅಟ್ಟೆಯಂತಿರುತ್ತದೆ.

ವಿಷಾಹಾರವಾಗುವ ಸಾಧ್ಯತೆ ಹೆಚ್ಚು ಕೋಳಿಗಳನ್ನು ಕೋಳಿ ಫಾರಮ್ಮುಗಳಲ್ಲಿ ಬೆಳೆಸಲಾಗುತ್ತದೆ. ಇಲ್ಲಿ ಕೋಳಿಗಳ್ ಆರೋಗ್ಯದ ಸುರಕ್ಷತೆಗಾಗಿ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಆದರೂ ಯಾವುದೋ ಮಾಯೆಯಲ್ಲಿ ಈ ಕೋಳಿಗಳಿಗೆ ಆವರಿಸುವ ಯಾವುದೇ ಬ್ಯಾಕ್ಟೀರಿಯಾಗಳು, ವಿಶೇಷವಾಗಿ ಸಾಲ್ಮೋನೆಲ್ಲಾ ಅಥವಾ campylobacter ಎಂಬ ಬ್ಯಾಕ್ಟೀರಿಯಾಗಳು ಕೋಳಿ ಮಾಂಸದಲ್ಲಿಯೂ ಕಾಣಬರಬಹುದು.

ಈ ಮಾಂಸವನ್ನು ಬೇಯಿಸುವಾಗ ಕೊಂಚ ಕಡಿಮೆ ಬೇಯಿಸಿದರೆ ಈ ಬ್ಯಾಕ್ಟೀರಿಯಾಗಳಲ್ಲಿ ಎಲ್ಲವೂ ಸಾಯದೇ ಕೆಲವು ಆಹಾರದ ಮೂಲಕ ಜಠರ ಸೇರಬಹುದು. ಈ ಬ್ಯಾಕ್ಟೀರಿಯಾಗಳು ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. ವಿಶೇಷವಾಗಿ ವೃದ್ಧರು, ಮಕ್ಕಳು ಹಾಗೂ ಗರ್ಭವತಿಯರಿಗೆ ಈ ಬ್ಯಾಕ್ಟೀರಿಯಾಗಳಿಂದ ಎದುರಾಗುವ ಅಪಾಯ ಹೆಚ್ಚೇ ಇರುತ್ತದೆ.

ಕೋಳಿ ಮಾಂಸದಲ್ಲಿರುವ ಬ್ಯಾಕ್ಟೀರಿಯಾಗಳು

ಕೋಳಿ ಮಾಂಸ ಮಾನವರಿಗೂ ಪ್ರಿಯವಾಗಿರುವಂತೆ ಹಲವು ಬ್ಯಾಕ್ಟೀರಿಯಾಗಳಿಗೂ ಅತಿ ಪ್ರಿಯವಾಗಿದೆ. ಫ್ರಿಜ್ಜಿನಿಂದ ಹೊರಬಂದ ಕ್ಷಣದಲ್ಲಿಯೇ ಇವು ಕೋಳಿಮಾಂಸದ ಮೇಲೆ ಧಾಳಿಯಿಡುತ್ತವೆ. ಇದಕ್ಕಾಗಿ ಕೋಳಿಮಾಂಸವನ್ನು ನಿಗದಿತ ತಾಪಮಾನದಲ್ಲಿ ಹಾಗೂ ಸೂಕ್ತ ಸಮಯದವರೆಗೆ ಒಲೆಯಲ್ಲಿಡಬೇಕು. ತಾಪಮಾನವನ್ನು ಅಳೆಯುವ ಥರ್ಮೋಮೀಟರ್ ಒಂದನ್ನು ಒಲೆಯ ಬಳಿ ಸ್ಥಾಪಿಸಿ ಒಂದೇ ತೆರನಾದ ಬಿಸಿಯನ್ನು ನಿಯಂತ್ರಿಸಬಹುದು. ಒಂದು ವೇಳೆ ಪೂರ್ಣವಾಗಿ ಬೇಯದಿರುವ ಮಾಂಸವನ್ನು ಸೇವಿಸಿದರೆ ಹಲವು ಕ್ರಿಮಿಗಳು ಹೊಟ್ಟೆ ಸೇರಬಹುದು. ಲಾಡಿಹುಳ ಇದಕ್ಕೊಂದು ಉದಾಹರಣೆಯಾಗಿದೆ.

​ನಿತ್ಯವೂ ಸೇವಿಸದಿರಿ

ಕೋಳಿಮಾಂಸ ಪೌಷ್ಟಿಕವಾಗಿದ್ದರೂ, ರುಚಿಕರವಾಗಿದ್ದರೂ ಸರಿ, ನಿತ್ಯವೂ ಸೇವಿಸದಿರಿ. ತಜ್ಞರ ಪ್ರಕಾರ, ವಾರಕ್ಕೊಮ್ಮೆ ಎರಡು ಪ್ರಮಾಣದಷ್ಟು ಕೋಳಿಮಾಂಸವನ್ನು ಸೇವಿಸಿದರೆ ಬೇಕಾದಷ್ಟಾಯಿತು. ಉಳಿದಂತೆ ಆದಷ್ಟೂ ಮಟ್ಟಿಗೆ ಸಸ್ಯಾಹಾರಗಳನ್ನೇ ಸೇವಿಸಿ. ನಿಮ್ಮ ಆಹಾರದಲ್ಲಿ ವೈವಿಧ್ಯತೆ ಇರಲಿ. ಇದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಹಾಗೂ ನಿಸರ್ಗದ ನಿಯಮಗಳನ್ನೂ ಪಾಲಿಸಿದಂತಾಗುತ್ತದೆ.

ತಜ್ಞರ ಪ್ರಕಾರ, ಸಾಮಾನ್ಯ ತೂಕದ ವ್ಯಕ್ತಿಗಳು ವಾರವೊಂದರಲ್ಲಿ 0.73 ಕೇಜಿಯಷ್ಟು ಕೋಳಿ ಮಾಂಸವನ್ನು ಹಾಗೂ ಇತರ ಕುಕ್ಕುಟ ಉತ್ಪನ್ನಗಳನ್ನು (ಮೊಟ್ಟೆಯನ್ನೂ ಸೇರಿಸಿ) ಸೇವಿಸಬಹುದು. ಇದಕ್ಕೂ ಮೀರಿದ ಪ್ರಮಾಣ ಅನಾರೋಗ್ಯಕರವಾಗಿದೆ.

ಹಾರ್ಮೋನುಗಳ ಫಲದಿಂದ ಬೆಳೆದ ಕೋಳಿ ನಾಟಿ ಕೋಳಿಗೆ ಸಾಟಿಯಲ್ಲ

ಆದರೆ ನಾಟಿಕೋಳಿಗಳು ತಮ್ಮ ಆಹಾರವನ್ನು ತಾವೇ ಸಂಪಾದಿಸಿಕೊಳ್ಳುತ್ತವೆ. ಈ ಕೋಳಿಗಳ ಮಾಂಸದಲ್ಲಿ ಯಾವುದೇ ಕೃತಕ ಹಾರ್ಮೋನು ಇರುವುದಿಲ್ಲವಾದ್ದರಿಂದ ಧೈರ್ಯವಾಗಿ ಸೇವಿಸಬಹುದು.

ಫಾರಂ ಕೋಳಿಗಳ ಬೆಳವಣಿಗೆಗೆ ಹಲವು ಹಾರ್ಮೋನುಗಳನ್ನು ಇಂಜೆಕ್ಷನ್ ಮೂಲಕ ನೀಡಲಾಗುತ್ತದೆ. ಇದು ಮಾಂಸದಲ್ಲಿಯೂ ಉಳಿಯಬಹುದಾದ ಸಂಭವವಿದೆ. ಇದರಿಂದ ಮಾಂಸದ ಹಲವು ಉತ್ತಮ ಗುಣಗಳು ಅಳಿಯುತ್ತವೆ. ಈ ಮಾಂಸವನ್ನು ಸೇವಿಸುವುದರಿಂದ ಇಂದಲ್ಲ ನಾಳೆ ಏನಾದರೂ ತೊಂದರೆಯಾಗಬಹುದೆಂಬ ಅನುಮಾನ ಮೂಡುತ್ತದೆ.


Share News

Leave a Reply

Your email address will not be published. Required fields are marked *