Breaking News

ಸಹೋದ್ಯೋಗಿ ಯುವತಿಯನ್ನು ಕೊಲೆಗೈದ ವಿವಾಹಿತ ಪೊಲೀಸ್ ಕಾನ್ಸಟೇಬಲ್; ಎರಡು ವರ್ಷಗಳ ನಂತರ ಬಂಧನ!

Share News

ನವದೆಹಲಿ: ತನ್ನ ಪ್ರೀತಿ ನಿರಾಕರಿಸಿದ ಸಹೋದ್ಯೋಗಿ ಯುವತಿಯನ್ನು ಕೊಲೆಗೈದ ವಿವಾಹಿತ ಪೊಲೀಸ್ ಕಾನ್ಸಟೇಬಲ್ ಓರ್ವ ಎರಡು ವರ್ಷಗಳ ಕಾಲ ಹಲವು ರೀತಿಯ ಕತೆ ಕಟ್ಟಿ ಕೊಲೆಯಾದ ಯುವತಿಯ ಮನೆಯವರಿಗೂ, ಪೊಲೀಸರಿಗೂ ಮಂಕುಬೂದಿ ಎರಚಿದ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ. ಈತನ ಕಳ್ಳಾಟವನ್ನು ಕೊನೆಗೂ ಬೇಧಿಸಿದ ಕ್ರೈಂ ಬ್ರಾಂಚ್ ಪೊಲೀಸರು ಕೊಲೆ ಆರೋಪಿ ಹಾಗೂ ಆತನಿಗೆ ಸಹಾಯ ಮಾಡಿದ್ದ ಆತನ ಇಬ್ಬರು ಸ್ನೇಹಿತರನ್ನು ಬಂಧಿಸಿದ್ದಾರೆ.

42 ವರ್ಷದ ಸುರೇಂದ್ರ ರಾಣಾ (Surendra Rana) ಕೊಲೆ ಮಾಡಿದ ಹೆಡ್‌ಕಾನ್ಸ್‌ಟೇಬಲ್‌. ಇದರ ಜೊತೆ ಈತನಿಗೆ ನೆರವಾದ ಈತನ ಸಂಬಂಧಿ 26 ವರ್ಷದ ರಾವಿನ್ ಹಾಗೂ 33 ವರ್ಷದ ರಾಜ್‌ಪಾಲ್‌ (Rajpal) ಎಂಬುವರನ್ನು ಕೂಡ ದೆಹಲಿ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ಹುಡುಗಿ ಮೋನಾ 2014ರಲ್ಲಿ ದೆಹಲಿ ಪೊಲೀಸ್ ಇಲಾಖೆಗೆ ಮಹಿಳಾ ಕಾನ್ಸ್‌ಟೇಬಲ್ ಆಗಿ ಕೆಲಸಕ್ಕೆ ಸೇರಿದ್ದಳು.

ಕೆಲಸ ಬಿಟ್ಟು ಯುಪಿಎಸ್‌ಸಿ ಪರೀಕ್ಷಗೆ ತಯಾರಾಗುತ್ತಿದ್ದ ಮೋನಾ

ಈಕೆ ಕೆಲಸಕ್ಕೆ ಸೇರುವ ಎರಡು ವರ್ಷಗಳ ಹಿಂದೆ ರಾಣಾ ಕೆಲಸಕ್ಕೆ ಸೇರಿದ್ದ, ಇಬ್ಬರೂ ಕಂಟ್ರೋಲ್ ರೂಮ್‌ನಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾಗ ಪರಸ್ಪರ ಪರಿಚಯವಾಗಿದ್ದರು. ಇದಾದ ನಂತರ ಮೋನಾಗೆ ಉತ್ತರ ಪ್ರದೇಶ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್‌ಪೆಕ್ಟರ್ (Sub Inspector) ಕೆಲಸ ಸಿಕ್ಕಿತ್ತು. ಆದರೆ  ಕೆಲಸ ಬಿಟ್ಟ ಆಕೆ ದೆಹಲಿಯಲ್ಲಿ ಯುಪಿಎಸ್‌ಸಿಯ ನಾಗರಿಕ ಸೇವಾ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ಶುರು ಮಾಡಿದ್ದರು.

ಪೊಲೀಸರ ಪ್ರಕಾರ, ಸುರೇಂದ್ರ, ಮೋನಾ ಕೆಲಸ ತೊರೆದ ನಂತರವೂ ಅವಳ ಮೇಲೆ ಒಂದು ಕಣ್ಣಿಟ್ಟಿದ್ದ. ಈ ವಿಚಾರ ಮೋನಾಗೆ ತಿಳಿದಾಗ, ಅವಳು ಈತನ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಳು.  ಇದಾದ ನಂತರ ಇದೇ ವಿಚಾರವಾಗಿ 2021ರ  ಸೆಪ್ಟೆಂಬರ್ 8 ರಂದು ಇಬ್ಬರ ನಡುವೆ ಜಗಳವಾಗಿತ್ತು, ನಂತರ ಸುರೇಂದ್ರ ಮೋನಾಳನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕತ್ತು ಹಿಸುಕಿ ಕೊಂದಿದ್ದು, ನಂತರ ಅವಳ ಮೃತದೇಹವನ್ನು ಕಲ್ಲು ಕಟ್ಟಿ ಚರಂಡಿಗೆ ಎಸೆದಿದ್ದ.

ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟ ಇಲೆಕ್ಟ್ರೀಕ್ ಕಾರು ; ವಿಡಿಯೊ ವೈರಲ್

ಕೊಲೆಯ ನಂತರ ಕತೆ ಕಟ್ಟಿದ್ದ ರಾಣಾ

ನಂತರ ಮೋನಾಳ ಕುಟುಂಬಕ್ಕೆ ಕರೆ ಮಾಡಿದ ಆರೋಪಿ ರಾಣಾ, ಆಕೆ  ಅರವಿಂದ್‌ ಎಂಬಾತನ ಜೊತೆ ಓಡಿ ಹೋಗಿದ್ದಾಳೆ ಎಂದು ಹೇಳಿ ಅವರನ್ನು ನಂಬಿಸಿದ್ದಲ್ಲದೇ ಆಕೆಯನ್ನು ತಾನು ಹುಡುಕುತ್ತಿರುವುದಾಗಿ  ಹೇಳಿದ್ದ. ಅಲ್ಲದೇ ಆಕೆಯ ಕುಟುಂಬದವರ ಜೊತೆ ಹಲವು ಬಾರಿ ಪೊಲೀಸ್ ಠಾಣೆಗೂ ಈತ ಭೇಟಿ ನೀಡಿದ್ದ.  ಅಲ್ಲದೇ ಮೋನಾ ಬದುಕಿದ್ದಾಳೆ ಎಂದು ತೋರಿಸುವ ಸಲುವಾಗಿ, ಮೋನಾ ಕೋವಿಡ್ ಲಸಿಕೆ ಪಡೆದಿರುವ ಪ್ರಮಾಣಪತ್ರವನ್ನು ಕುಟುಂಬಕ್ಕೆ ತೋರಿಸಿದ್ದ. ಇದಕ್ಕಾಗಿ ಓರ್ವ ಮಹಿಳೆಯನ್ನು ಲಸಿಕಾ ಕೇಂದ್ರಕ್ಕೆ ಕರೆದೊಯ್ದು ಮೋನಾ ಹೆಸರಲ್ಲಿ ಕೋವಿಡ್ ಲಸಿಕೆ (Covid vaccine) ಪ್ರಮಾಣಪತ್ರ ಪಡೆಯಲು ಯಶಸ್ವಿಯಾಗಿದ್ದ. ಬರೀ ಇಷ್ಟೇ ಅಲ್ಲದೇ ಆಕೆ ಜೀವಂತವಿದ್ದಾಳೆ ಎಂದು ತೋರಿಸಲು ಆಕೆಯ ಸಿಮ್‌ಕಾರ್ಡ್‌, ಎಟಿಎಂ ಕಾರ್ಡ್‌ನ್ನು ಕೂಡ ಬಳಕೆ ಮಾಡುತ್ತಿದ್ದ. ಮೋನಾ ಎಲ್ಲಿದ್ದಾಳೆ ಎಂಬ ಬಗ್ಗೆ ನನಗೆ ಮಾಹಿತಿ ಇದೆ ಎಂದು ಮೋನಾ ಕುಟುಂಬಕ್ಕೆ ಕರೆ ಮಾಡಿ ಹೇಳುತ್ತಿದ್ದ . ಅಲ್ಲದೇ ಆಕೆಯ ಕುಟುಂಬದ ಜೊತೆ ಐದಾರು ರಾಜ್ಯಗಳ ನಗರಗಳಿಗೆ ಭೇಟಿ ನೀಡಿದ್ದ.

ಸೋದರ ಸಂಬಂಧಿಗೆ ಅರವಿಂದನ ವೇಷ

ಬರೀ ಇಷ್ಟೇ ಅಲ್ಲದೇ ಈ ಪ್ರಕರಣಕ್ಕೆ ತನ್ನ ಸೋದರ ಸಂಬಂಧಿಯನ್ನು ಎಳೆತಂದ ರಾಣಾ, ಆತನನ್ನು ಮೋನಾ ಪ್ರೇಮಿ ಅರವಿಂದ್ ಎಂಬಂತೆ ಬಿಂಬಿಸಿ ಮೋನಾ ಕುಟುಂಬದ ಜೊತೆ ಮಾತನಾಡಿಸಿದ್ದ.  ಒಂದು ಬಾರಿ ಆಕೆಯ ಮನೆಯವರಿಗೆ ಕರೆ ಮಾಡಿದ ಈ ಅರವಿಂದ್ ಅಲಿಯಾಸ್ ರಾಣಾ, ತಾನು ಮೋನಾ ಮದುವೆಯಾಗಿದ್ದೇವೆ, ಗುರ್ಗಾಂವ್‌ನಲ್ಲಿ ವಾಸ ಮಾಡ್ತಿದ್ದೇವೆ. ನನ್ನ ನಂಬಿಕೊಂಡು ನನ್ನ ಕುಟುಂಬವಿದ್ದು, ನಾವು ಪಂಜಾಬ್‌ಗೆ ಹೋಗುತ್ತಿದ್ದೇವೆ. ಈಗ ರೋಹ್ಟಕ್ ತಲುಪಿದ್ದೇವೆ. ಇನ್ನು 10ರಿಂದ 15 ನಿಮಿಷದಲ್ಲಿ ನಾವು ನಿಮ್ಮ ಬಳಿ ಬರುತ್ತೇವೆ ಎಂದೆಲ್ಲಾ ನಂಬಿಸಿದ್ದ. ಈ ವೇಳೆ ಮೋನಾ ಕುಟುಂಬದವರು ಮೋನಾ ಜೊತೆ ಮಾತನಾಡಲು ಫೋನ್ ನೀಡುವಂತೆ ಕೇಳಿದಾಗ, ಆಕೆ ಭಯಗೊಂಡಿದ್ದಾಳೆ, ಆಕೆ ಮಾತನಾಡುವ ಸ್ಥಿತಿಯಲ್ಲಿ ಇಲ್ಲ ಎಂದಿದ್ದ.

ಮಂಗಳೂರು : ಮಹೇಶ್ ಬಸ್ ಮಾಲಕ ಪ್ರಕಾಶ್ ಆತ್ಮಹತ್ಯೆ!

ಪೊಲೀಸರ ದಾರಿ ತಪ್ಪಿಸಲು ಹಲವು ತಂತ್ರ

ಪೊಲೀಸರ ದಾರಿ ತಪ್ಪಿಸುವುದಕ್ಕಾಗಿ ಈ ರಾಬಿನ್ ಅಲಿಯಾಸ್ ಅರವಿಂದ್‌  ವೇಶ್ಯೆಯರೊಂದಿಗೆ ಹರ್ಯಾಣ, ಡೆಹ್ರಾಡೂನ್ ಹಾಗೂ ರಿಷಿಕೇಶ್, ಮುಸೋರಿಯ ಹೊಟೇಲ್‌ಗಳಿಗೆ ಭೇಟಿ ನೀಡುತ್ತಿದ್ದ. ಇಲ್ಲೆಲ್ಲಾ ರಾಬಿನ್ ಉದ್ದೇಶಪೂರ್ವಕವಾಗಿ ಸಂತ್ರಸ್ತೆಯ ದಾಖಲೆಗಳನ್ನು ಹೋಟೆಲ್‌ಗಳಲ್ಲಿ ನೀಡುತ್ತಿದ್ದ.  ಹೀಗಾಗಿ ಪೊಲೀಸರು ಹೊಟೇಲ್‌ಗಳಿಗೆ ಕರೆ ಮಾಡಿದಾಗ ಮೋನಾ ಅಲ್ಲಿ ತಂಗಿದ್ದಾಳೆ ಎಂದು ಹೊಟೇಲ್‌ನವರು ಹೇಳುತ್ತಿದ್ದರು. ಹೀಗಾಗಿ ಪೊಲೀಸರು ಮೋನಾ ಜೀವಂತವಾಗಿದ್ದಾಳೆ. ಆದರೆ ಆಕೆಗೆ ಮನೆಗೆ ಹೋಗುವ ಮನಸ್ಸಿಲ್ಲ ಎಂದು ಭಾವಿಸಿದ್ದರು ಎಂದು ಪ್ರಕರಣದ ತನಿಖೆ ಮೇಲುಸ್ತುವಾರಿ ವಹಿಸಿದ ಅಪರಾಧ ವಿಭಾಗದ ವಿಶೇಷ ಪೊಲೀಸ್ ಆಯುಕ್ತ ರವೀಂದ್ರ ಯಾದವ್ ಹೇಳಿದ್ದಾರೆ.

ಅಲ್ಲದೇ ಆರೋಪಿ ರಾಣಾ ಆಕೆಯ ಹಲವು ಆಡಿಯೋಗಳನ್ನು ಎಡಿಟ್ ಮಾಡಿ ಕುಟುಂಬಕ್ಕೆ ಕೇಳಿಸಿದ್ದ, ಇದರಲ್ಲಿ ಆಕೆ ತಾನು ಮನೆಗೆ ಬರಲ್ಲ ಎಂದು ಹೇಳುವುದಿದೆ. ಆದರೆ ಎರಡು ತಿಂಗಳ ಹಿಂದಷ್ಟೇ ಕ್ರೈಂ ಬ್ರಾಂಚ್‌ಗೆ ಈ ಪ್ರಕರಣವನ್ನು ಹಸ್ತಾಂತರಿಸಿದ ನಂತರ ಈತನ ಕಪಟ ನಾಟಕ ಬಯಲಾಗಿದೆ.

ಹುಬ್ಬಳ್ಳಿಯಲ್ಲಿ ಗಣಪತಿ ಮೆರವಣಿಗೆಯಲ್ಲಿ ತಪ್ಪಿದ ಬಹುದೊಡ್ಡ ದುರಂತ!


Share News

Leave a Reply

Your email address will not be published. Required fields are marked *