Breaking News

ಪಾಕಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು; ಹೊಸ ದಾಖಲೆ ಸೃಷ್ಟಿಸಿದ ವಿರಾಟ್ ಕೊಹ್ಲಿ!

Share News

ಕೊಲಂಬೋ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ 228 ರನ್ ಗಳ ಭರ್ಜರಿ ಜಯ ಸಾಧಿಸಿದೆ.ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲೂ ಅದ್ಭುತ ಪ್ರದರ್ಶನ ನೀಡಿದ ಭಾರತ, ಭಾಬರ್ ಪಡೆಗೆ ಐತಿಹಾಸಿಕ ಸೋಲಿನ ಶಾಕ್ ನೀಡಿತು. ಇದರೊಂದಿಗೆ ಏಷ್ಯಾಕಪ್ ಸೂಪರ್ 4 ಸುತ್ತಿನ ಪಾಯಿಂಟ್ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿತು.

ಶ್ರೀಲಂಕಾದ ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ಇಂದು ನಡೆದ ಪಂದ್ಯದಲ್ಲಿ ಭಾರತ ನೀಡಿದ್ದ 357ರನ್ ಗಳ ಗುರಿ ಬೆನ್ನು ಹತ್ತಿದ ಪಾಕಿಸ್ತಾನ 32 ಓವರ್ ನಲ್ಲಿ 128 ರನ್ ಗಳಿಸಿ 228ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು. ಪಾಕಿಸ್ತಾನದ ಪರ ಆರಂಭಿಕ ಆಟಗಾರ ಫಖರ್ ಜಮಾನ್ ಗಳಿಸಿದ 27 ರನ್ ಗಳೇ ಆ ತಂಡದ ಬ್ಯಾಟರ್ ಗಳಿಸಿದ ಗರಿಷ್ಟ ರನ್ ಆಗಿತ್ತು.

ನಾಯಕ ಬಾಬರ್ ಅಜಂ 10 ರನ್ ಗಳಿಸಿದರೆ, ಅಘಾ ಸಲ್ಮಾನ್ ಮತ್ತು ಇಫ್ತಿಕಾರ್ ಅಹ್ಮದ್ ತಲಾ 23 ರನ್ ಗಳಿಸಿದರು. ಉಳಿದ ಯಾವ ಬ್ಯಾಟರ್ ಕೂಡ ಎರಡಂಕಿ ಮೊತ್ತ ದಾಟಲಿಲ್ಲ.

128 ರನ್ ಗಳಿಸಿದ್ದ ವೇಳೆ ಫಾಹೀಂ ಅಶ್ರಫ್ ಕುಲದೀಪ್ ಯಾದವ್ ಬೌಲಿಂಗ್ ನಲ್ಲಿ ಔಟ್ ಆದರು. ಇದು ಪಾಕಿಸ್ತಾನದ 8ನೇ ವಿಕೆಟ್ ಆಗಿತ್ತು. ಆದರೆ ಆ ಬಳಿಕ ಪಾಕಿಸ್ತಾನದ ಬಾಕಿ ಇಬ್ಬರು ಆಟಗಾರರು ಬ್ಯಾಟಿಂಗ್ ಬರಲಿಲ್ಲ. ನಸೀಮ್ ಶಾ ಮತ್ತು ಹ್ಯಾರಿಸ್ ಗಾಯಗೊಂಡಿದ್ದರಿಂದ ಅವರು ಬ್ಯಾಟಿಂಗ್ ಗೆ ಬರಲಿಲ್ಲ. ಹೀಗಾಗಿ ಪಾಕಿಸ್ತಾನ ತಂಡವನ್ನು ಆಲೌಟ್ ಎಂದು ಘೋಷಿಸಿ ಭಾರತ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು.

ಆ ಮೂಲಕ ಭಾರತ ಪಾಕಿಸ್ತಾನದ ವಿರುದ್ಧ 228ರನ್ ಗಳ ಅಂತರದ ಭರ್ಜರಿ ಜಯ ಸಾಧಿಸಿತು. ಭಾರತದ ಪರ ಕುಲದೀಪ್ ಯಾದವ್ 5 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರೆ, ಜಸ್ ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಮತ್ತು ಶಾರ್ದೂಲ್ ಠಾಕೂರ್ ತಲಾ 1 ವಿಕೆಟ್ ಪಡೆದರು.

ಅಗ್ರ ಸ್ಥಾನ ಪಡೆದುಕೊಂಡ ಭಾರತ:

ಪಾಕಿಸ್ತಾನದ ಎದುರು ಬೃಹತ್ ಗೆಲುವು ದಾಖಲಿಸಿರುವ ಭಾರತ ಪ್ರಸ್ತುತ ಏಷ್ಯಾಕಪ್ 2023 ರ ಸೂಪರ್ 4 ಸುತ್ತಿನ ಪಾಯಿಂಟ್​ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಈ ಸುತ್ತಿನಲ್ಲಿ ಆಡಿರುವ ಏಕೈಕ ಪಂದ್ಯವನ್ನು ಭಾರಿ ಅಂತರದಿಂದ ಗೆದ್ದಿರುವ ರೋಹಿತ್ ಪಡೆ ಎರಡು ಅಂಕಗಳನ್ನು ಸಂಪಾದಿಸಿದೆ. ಅಲ್ಲದೆ 228 ರನ್​ಗಳ ಗೆಲುವು ಭಾರತದ ರನ್​ ರೇಟ್​ ಅನ್ನು +4.560 ಕ್ಕೆ ಏರಿಸಿದೆ. ಹೀಗಾಗಿ ಟೀಂ ಇಂಡಿಯಾ ಉಳಿದ ಮೂರು ತಂಡಗಳಿಗಿಂತ ಅಧಿಕ ನೆಟ್ ರನ್​ರೇಟ್​ನೊಂದಿಗೆ ಮೊದಲ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

ವಿಶ್ವ ದಾಖಲೆ ಬರೆದ ಕಿಂಗ್ ಕೊಹ್ಲಿ:

ಕೊಲಂಬೊದಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಸಿಡಿಲಬ್ಬರದ ಸೆಂಚುರಿ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ (Virat Kohli) ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕಿಂಗ್ ಕೊಹ್ಲಿ 84 ಎಸೆತಗಳಲ್ಲಿ ಶತಕ ಪೂರೈಸಿದರು. ಇನ್ನು ಸೆಂಚುರಿ ಬಳಿಕ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ವಿರಾಟ್ 94 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 9 ಫೋರ್​ಗಳೊಂದಿಗೆ ಅಜೇಯ 122 ರನ್​ ಬಾರಿಸಿದರು.

ಈ 122 ರನ್​ಗಳೊಂದಿಗೆ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್​ನಲ್ಲಿ 13 ಸಾವಿರ ರನ್ ಪೂರೈಸಿದ್ದಾರೆ. ಅದು ಕೂಡ ಅತೀ ವೇಗವಾಗಿ ಎಂಬುದು ವಿಶೇಷ. ಅಂದರೆ ಏಕದಿನ ಕ್ರಿಕೆಟ್​ನಲ್ಲಿ ಅತೀ ಕಡಿಮೆ ಇನಿಂಗ್ಸ್​ನಲ್ಲಿ 13 ಸಾವಿರ ರನ್ ಕಲೆಹಾಕಿದ ವಿಶ್ವ ದಾಖಲೆ ಕಿಂಗ್ ಕೊಹ್ಲಿಯ ಪಾಲಾಗಿದೆ.

ಇದಕ್ಕೂ ಮುನ್ನ ಈ ವಿಶ್ವ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು. ಸಚಿನ್ 321 ಏಕದಿನ ಇನಿಂಗ್ಸ್​ಗಳ ಮೂಲಕ 13 ಸಾವಿರ ರನ್ ಕಲೆಹಾಕಿದ್ದರು. ಇದೀಗ ವಿರಾಟ್ ಕೊಹ್ಲಿ ಕೇವಲ 267 ಏಕದಿನ ಇನಿಂಗ್ಸ್​ಗಳ ಮೂಲಕ 13 ಸಾವಿರ ರನ್ ಪೂರೈಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅಲ್ಲದೆ ಏಕದಿನ ಕ್ರಿಕೆಟ್​ನಲ್ಲಿ 47 ಶತಕ ಬಾರಿಸಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲೂ ಸಚಿನ್ ತೆಂಡೂಲ್ಕರ್ (49 ಶತಕ) ಅಗ್ರಸ್ಥಾನದಲ್ಲಿದ್ದಾರೆ.ಏಕದಿನ ಕ್ರಿಕೆಟ್​ನಲ್ಲಿ ಅತೀ ವೇಗವಾಗಿ 8000, 9000, 10000, 11000, 12000 ರನ್ ಕಲೆಹಾಕಿದ ವಿಶ್ವ ದಾಖಲೆ ಹೊಂದಿದ್ದ ಕಿಂಗ್ ಕೊಹ್ಲಿ ಇದೀಗ 13000 ರನ್​ಗಳನ್ನು ಅದೇ ವೇಗದಲ್ಲಿ ಪೂರೈಸಿರುವುದು ವಿಶೇಷ.


Share News

Leave a Reply

Your email address will not be published. Required fields are marked *