Breaking News

ಅಕ್ಷಯ್‌ ಕಲ್ಲೇಗ ಹತ್ಯೆ ಪ್ರಕರಣ: ಆರೋಪಿಗಳಿಗೆ 15 ದಿನಗಳ ನ್ಯಾಯಾಂಗ ಬಂಧನ

Share News

ಪುತ್ತೂರು: ನಗರದ ಹೊರವಲಯದ ನೆಹರೂ ನಗರದಲ್ಲಿ ಸೋಮವಾರ ತಡರಾತ್ರಿ ಕಲ್ಲೇಗ ಟೈಗರ್ಸ್‌ ಹುಲಿ ವೇಷ ಕುಣಿತ ತಂಡದ ನಾಯಕ ಅಕ್ಷಯ್‌ ಕಲ್ಲೇಗ (26)ನನ್ನು ಬರ್ಬರವಾಗಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ನಾಲ್ವರು ಆರೋಪಿಗಳನ್ನು ಪೊಲೀಸರು ಬುಧವಾರ ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ. 22ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಆರೋಪಿಗಳಾದ ಬನ್ನೂರು ಕೃಷ್ಣ ನಗರದ ನಿವಾಸಿ, ಖಾಸಗಿ ಬಸ್‌ವೊಂದರ ಚಾಲಕ ಚೇತನ್‌, ದಾರಂದಕುಕ್ಕು ನಿವಾಸಿ ಮನೀಶ್‌, ಪಡೀಲು ನಿವಾಸಿ ಕೇಶವ, ಬನ್ನೂರು ನಿವಾಸಿ ಮಂಜುನಾಥನನ್ನು ಸೋಮವಾರ ಸಂಜೆ ಘಟನ ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸಲಾಯಿತು. ಬಳಿಕ ರಾತ್ರಿ ನ್ಯಾಯಾಧೀಶರ ಮನೆಗೆ ಹಾಜರುಪಡಿಸಲಾಗಿತ್ತು. ನ. 8ರಂದು ಬೆಳಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದ್ದಾರೆ.

ಇದನ್ನೂ ಓದಿ: ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ ಮಾಜಿ ಸಿಎಂ ಸದಾನಂದ ಗೌಡ

ನೀರವ ಮೌನ
ಈ ಘಟನೆಯಿಂದ ಕಲ್ಲೇಗ ಪರಿಸರ ಇನ್ನೂ ಚೇತರಿಸಿಕೊಂಡಿಲ್ಲ. ಅಕ್ಷಯ್‌ ಕಲ್ಲೇಗ ಹಾಗೂ ಹತ್ಯಾ ಆರೋಪಿಗಳು ಪರಸ್ಪರ ಸ್ನೇಹಿತರಾಗಿದ್ದರು. ಆಸ್ಪತ್ರೆ ಬಿಲ್‌ 1,850 ರೂ. ಪಾವತಿ ವಿಷಯ ಕೊಲೆಯಲ್ಲಿ ಅಂತ್ಯ ಕಂಡಿರುವುದು ಸ್ನೇಹಿತರ ವಲಯವನ್ನು ತಲ್ಲಣಗೊಳಿಸಿದೆ. ಇನ್ನೂ ಕೆಲವರು ಅಪಘಾತದ ವಿಚಾರ ನೆಪ ಮಾತ್ರ, ಬೇರೆ ಯಾವುದೋ ಪ್ರಬಲ ಕಾರಣ ಈ ಹತ್ಯೆಯ ಹಿಂದಿದೆ ಎನ್ನುವ ಅನುಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ.

ತಲವಾರು ಬೀಸುತ್ತಿದ್ದೇನೆ !
ಆರೋಪಿಗಳಾದ ಮನೀಷ್‌, ಚೇತನ್‌ ತಲವಾರಿನಿಂದ ಅಕ್ಷಯ್‌ ಮೇಲೆ ಮನಬಂದಂತೆ ಕಡಿದಿದ್ದಾರೆ. ಆತ ನೆಲಕ್ಕೆ ಉರುಳಿದ ವೇಳೆ ಆರೋಪಿ ಮನೀಷ್‌ ಅಕ್ಷಯ್‌ ಗೆಳೆಯನಿಗೆ ಕರೆ ಮಾಡಿ, ಅಕ್ಷಯ್‌ ಮಿತಿ ಮೀರಿ ಹೋಗಿದ್ದಾನೆ. ಹಾಗಾಗಿ ಮುಗಿಸುತ್ತಿದ್ದೇನೆ. ಆತನ ಮೇಲೆ ಕೊನೆಯದಾಗಿ ಮಚ್ಚು ಬೀಸುತ್ತಿದ್ದೇನೆ ಎಂದಿದ್ದಾನೆ. ಇದಕ್ಕೆ ಅಕ್ಷಯ್‌ ಸ್ನೇಹಿತ ಆತುರಪಡಬೇಡ, ನಾನು ಸ್ಥಳಕ್ಕೆ ಬರುತ್ತೇನೆ ಎಂದಿದ್ದ. ಇಲ್ಲ ಆಗುವುದಿಲ್ಲ ಎಂದು ಕರೆ ಕಡಿತ ಮಾಡಿ ಮಚ್ಚು ಬೀಸಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.

ದುರಸ್ತಿ ಆಗದ ಸಿಸಿ ಕೆಮರಾ
ಪುತ್ತೂರು ನಗರದಲ್ಲಿ ಡಿವೈಎಸ್ಪಿ ಕಚೇರಿ, ನಗರ ಠಾಣೆ, ಮಹಿಳಾ ಠಾಣೆ, ಸಂಚಾರ ಠಾಣೆಗಳಿವೆ. ಅಚ್ಚರಿಯೆಂದರೆ ಸುರಕ್ಷತೆಯ ದೃಷ್ಟಿಯಿಂದ ಅಳವಡಿಸಿರುವ ಬಹುತೇಕ ಸಿಸಿ ಕೆಮರಾಗಳು ಹಾಳಾಗಿ ವರ್ಷಗಳು ಕಳೆದರೂ ದುರಸ್ತಿ ಆಗಿಲ್ಲ. ವಾಣಿಜ್ಯ ಮಳಿಗೆಗಳಲ್ಲಿ ಸಿಸಿ ಕೆಮರಾ ಇದ್ದರೂ ಹೆಚ್ಚಿನವು ಹಾಳಾಗಿವೆ.

ಮಾದಕ ಪದಾರ್ಥ
ನಗರದ ಶಿಕ್ಷಣ ಸಂಸ್ಥೆ, ಹಾಸ್ಟೆಲ್‌, ಜನವಸತಿ ಸ್ಥಳಗಳನ್ನೇ ಗುರಿಯಾಗಿಸಿ ಕೇರಳದಿಂದ ಮಾದಕ ವಸ್ತುಗಳನ್ನು ಪೂರೈಸಿ ಯುವಜನತೆಯನ್ನು ಅದರ ದಾಸರನ್ನಾಗಿಸುವ ಜಾಲವೊಂದು ಸಕ್ರಿಯವಾಗಿವೆ ಎನ್ನಲಾಗಿದೆ. ಕೊಲೆ ನಡೆದ ಪರಿಸರದಲ್ಲಿ ಕೆಲವು ವರ್ಷಗಳ ಹಿಂದೆ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದವನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆಯೂ ನಡೆದಿತ್ತು.

ಇದನ್ನೂ ಓದಿ: ಅಮಿತ್ ಶಾ ರಥಕ್ಕೆ ವಿದ್ಯುತ್ ಸ್ಪರ್ಶ; ಅಪಾಯದಿಂದ ಪಾರು!

ರೌಂಡ್ಸ್‌ ವೈಫ‌ಲ್ಯ
ಅಕ್ಷಯ್‌ ಕೊಲೆ ನಡೆದ ಸ್ಥಳವು ಜನನಿಬಿಡ ಪ್ರದೇಶವಾಗಿದ್ದು ರಾತ್ರಿ 12 ಗಂಟೆಯ ತನಕವೂ ವಾಹನ, ಜನರ ಓಡಾಟ ಇರುವ ಸ್ಥಳವಾಗಿದೆ. ಇಂತಹ ಸ್ಥಳಗಳಲ್ಲಿ ರೌಂಡ್ಸ್‌ ಅಪರೂಪವಾಗಿದ್ದರಿಂದ ಕೊಲೆ ಘಟನೆಗಳು ಸಂಭವಿಸುತ್ತಿವೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.

ಆರೋಪಿ ಉಚ್ಚಾಟನೆ
ಅಕ್ಷಯ್‌ ಕಲ್ಲೇಗ ಕೊಲೆ ಪ್ರಕರಣದ ಆರೋಪಿಯಾಗಿರುವ ಪುತ್ತೂರು ಕಾಂಗ್ರೆಸ್‌ ಎಸ್‌.ಸಿ. ಘಟಕದ ಅಧ್ಯಕ್ಷ ಕೇಶವ ಪಡೀಲ್‌ನನ್ನು ತತ್‌ಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದ ಜವಾಬ್ದಾರಿಯಿಂದ ಉಚ್ಚಾಟಿಸಲಾಗಿದೆ ಎಂದು ಪುತ್ತೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ತಿಳಿಸಿದ್ದಾರೆ.

ಪ್ರತೀಕಾರದ ಎಚ್ಚರಿಕೆ !
ಆರೋಪಿಗಳನ್ನು ಘಟನ ಸ್ಥಳಕ್ಕೆ ಕೊಂಡೊಯ್ದ ವೇಳೆ ಅಕ್ಷಯ್‌ನ ಸ್ನೇಹಿತರು ಇದ್ದು ಆರೋಪಿಗಳನ್ನು ಕಂಡ ತತ್‌ಕ್ಷಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವರು ಪ್ರತಿಕಾರದ ಮಾತುಗಳನ್ನಾಡಿದ್ದು ಈ ವೇಳೆ ಪೊಲೀಸರು ಗುಂಪನ್ನು ಚದುರಿಸಿದ್ದಾರೆ. ಸೋಮವಾರ ಠಾಣೆಯಲ್ಲಿದ್ದ ಆರೋಪಿಗಳನ್ನು ನೋಡಲು ಬಂದಿದ್ದ ಅಕ್ಷಯ್‌ ಜತೆಗೆ ಗುರುತಿಸಿಕೊಂಡಿದ್ದ ಓರ್ವನಿಗೆ ಪ್ರತಿಕಾರಕ್ಕೆ ಪ್ರಯತ್ನಿಸಿದರೆ ಪರಿಣಾಮ ನೆಟ್ಟಗಿರದು ಎಂದು ಆರೋಪಿಯೋರ್ವ ಎಚ್ಚರಿಕೆ ನೀಡಿದ್ದಾನೆ ಎನ್ನುವ ಮಾಹಿತಿ ಹರಿದಾಡುತ್ತಿದೆ.


Share News

Leave a Reply

Your email address will not be published. Required fields are marked *