Breaking News

ಚಿತ್ರರಂಗದ ಹಿರಿಯ ನಟಿ ಲೀಲಾವತಿ ನಿಧನ!

Share News

ಕನ್ನಡ ಚಿತ್ರರಂಗದ ಖ್ಯಾತ ನಟಿ ಲೀಲಾವತಿ (Leelavathi) ಅವರು ಇಹಲೋಕ ತ್ಯಜಿಸಿದ್ದಾರೆ. ಕಳೆದ ಕೆಲವು ತಿಂಗಳಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ಇಂದು (ಡಿಸೆಂಬರ್​ 8) ನಿಧನರಾಗಿದ್ದಾರೆ. 50 ವರ್ಷಗಳ ಕಾಲ ಚಿತ್ರರಂಗಕ್ಕೆ ಲೀಲಾವತಿ ಸೇವೆ ಸಲ್ಲಿಸಿದ್ದರು. ಅವರಿಗೆ 86 ವರ್ಷ ವಯಸ್ಸಾಗಿತ್ತು. ರಾಜ್​ಕುಮಾರ್​, ವಿಷ್ಣುವರ್ಧನ್​ ಮುಂತಾದ ನಟರ ಜೊತೆ ಅಭಿನಯಿಸಿ ಅವರು ಸೈ ಎನಿಸಿಕೊಂಡಿದ್ದರು. 600ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಅಪಾರ ಖ್ಯಾತಿ ಗಳಿಸಿದ್ದ ಲೀಲಾವತಿ ನಿಧನಕ್ಕೆ (Leelavathi Death) ಅಭಿಮಾನಿಗಳು, ಸೆಲೆಬ್ರಿಟಿಗಳು, ರಾಜಕೀಯ ಗಣ್ಯರು ಕಂಬನಿ ಮಿಡಿದಿದ್ದಾರೆ. ನಟನೆ ಮಾತ್ರವಲ್ಲದೇ ಸಾಮಾಜಿಕ ಕೆಲಸಗಳ ಮೂಲಕವೂ ಲೀಲಾವತಿ ಗುರುತಿಸಿಕೊಂಡಿದ್ದರು. ಪುತ್ರ ವಿನೋದ್​ ರಾಜ್​ (Vinod Raj) ಅವರನ್ನು ಲೀಲಾವತಿ ಅಗಲಿದ್ದಾರೆ.

ನಟಿ ಲೀಲಾವತಿ ಅವರು ನೆಲಮಂಗಲದ ಸೋಲದೇವನಹಳ್ಳಿ ಬಳಿ ಪುತ್ರ ವಿನೋದ್​ ರಾಜ್​ ಜೊತೆ ವಾಸವಾಗಿದ್ದರು. ಸಿನಿಮಾದಿಂದ ದೂರ ಉಳಿದುಕೊಂಡಿದ್ದ ಅವರು ಕೃಷಿ ಕೆಲಸದಲ್ಲಿ ತೊಡಗಿಕೊಂಡಿದ್ದರು. ವಿನೋದ್​ ರಾಜ್​ ಕೂಡ ಕೃಷಿ ಕೆಲಸ ಮಾಡುತ್ತಿದ್ದಾರೆ. ಲೀಲಾವತಿ ಅವರ ಅನಾರೋಗ್ಯದ ವಿಷಯ ತಿಳಿದ ಬಳಿಕ ಕನ್ನಡ ಚಿತ್ರರಂಗದ ಅನೇಕರು ಸೋಲದೇವನಹಳ್ಳಿಗೆ ಬಂದು ಆರೋಗ್ಯ ವಿಚಾರಿಸಿದ್ದರು. ಶಿವರಾಜ್​ಕುಮಾರ್​, ಗೀತಾ ಶಿವರಾಜ್​ಕುಮಾರ್​, ದರ್ಶನ್​, ಅಭಿಷೇಕ್​ ಅಂಬರೀಷ್​, ಅರ್ಜುನ್​ ಸರ್ಜಾ, ಡಿ.ಕೆ. ಶಿವಕುಮಾರ್​, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕರು ಬಂದು ವಿನೋದ್​ ರಾಜ್​ಗೆ ಧೈರ್ಯ ತುಂಬಿದ್ದರು.

ಲೀಲಾವತಿ ಅವರು ಇನ್ನೂ ಒಂದಷ್ಟು ವರ್ಷಗಳ ಕಾಲ ಆರೋಗ್ಯಯುತವಾಗಿ ಇರಲಿ ಎಂದು ಎಲ್ಲರೂ ಹಾರೈಸಿದ್ದರು. ಆದರೆ ಯಾರ ಪ್ರಾರ್ಥನೆಯೂ ಫಲಿಸಲಿಲ್ಲ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು ಅವರು ಕೊನೆಯುಸಿರು ಎಳೆದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಪ್ರಾರ್ಥಿಸುತ್ತಿದ್ದಾರೆ.

ಲೀಲಾವತಿ ಅವರು ಚಿತ್ರರಂಗದಿಂದ ದೂರ ಉಳಿದುಕೊಂಡಿದ್ದರೂ ಕೂಡ ಸಿನಿಮಾ ಕಲಾವಿದರ ಬಗ್ಗೆ ಕಾಳಜಿ ಹೊಂದಿದ್ದರು. ಅನೇಕ ಕಲಾವಿದರಿಗೆ ಮಾಸಾಶನ ಸಿಗುವಂತೆ ಮಾಡಿದ್ದರು. ಪ್ರಾಣಿಗಳ ಬಗ್ಗೆ ಅವರಿಗೆ ಅಪಾರ ಪ್ರೀತಿ ಇತ್ತು. ಅದೇ ಕಾರಣಕ್ಕಾಗಿ ಅವರು ಸ್ವಂತ ಹಣದಲ್ಲಿ ಸೋಲದೇವನಹಳ್ಳಿ ಬಳಿ ಪಶು ಆಸ್ಪತ್ರೆ ನಿರ್ಮಿಸಿದ್ದರು. ಆ ಆಸ್ಪತ್ರೆ ಉದ್ಘಾಟನೆ ಆದ ಕೆಲವೇ ದಿನಗಳ ಬಳಿಕ ಅವರು ಇಹಲೋಕ ತ್ಯಜಿಸಿದ್ದಾರೆ.


Share News

Leave a Reply

Your email address will not be published. Required fields are marked *