Breaking News

ದಾಳಿಂಬೆ ಹಣ್ಣಿನಲ್ಲಿ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ?

Share News

ಪ್ರಕೃತಿ ಮನುಷ್ಯನ ಆರೋಗ್ಯಕ್ಕಾಗಿ ಹಲವಾರು ನೈಸರ್ಗಿಕ ಸತ್ವಗಳನ್ನು ಉಡುಗೊರೆಯಾಗಿ ನೀಡಿದೆ. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ದೊರೆಯುವ ಹಲವಾರು ಹಣ್ಣು-ಹಂಪಲುಗಳು, ಗಿಡಮೂಲಿಕೆಗಳು ಆರೋಗ್ಯ ವೃದ್ಧಿಸುವಲ್ಲಿ ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತದೆ.
ಉತ್ತಮ ಆರೋಗ್ಯಕ್ಕೆ ಹಣ್ಣುಗಳು ತುಂಬಾ ಸಹಾಯಕಾರಿ. ದೇಹದ ಪೋಷಣೆ, ಬೆಳವಣಿಗೆಗೆ ಹಣ್ಣುಗಳ ಸೇವನೆ ಉತ್ತಮ. ಇಂತಹ ಆರೋಗ್ಯಕರ ಹಣ್ಣುಗಳಲ್ಲಿ ದಾಳಿಂಬೆ ಕೂಡ ಒಂದು. ಇದು ದೇಹವನ್ನು ಸದೃಢವಾಗಿಡುತ್ತದೆ. ಜತೆಗೆ ಅನೇಕ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಲು ಸಹಾಯಕವಾಗಿದೆ. ದಾಳಿಂಬೆಯಲ್ಲಿ ವಿಟಮಿನ್ ಕೆ, ಸಿ, ಮತ್ತು ಬಿ, ಕಬ್ಬಿಣ, ಪೊಟ್ಯಾಸಿಯಮ್ ಸೇರಿ ವಿವಿಧ ಪೋಷಕಾಂಶಗಳಿವೆ. ದಾಳಿಂಬೆ ಹಣ್ಣನ್ನು ನಿಯಮಿತವಾಗಿ ಸೇವಿಸುವ ಮೂಲಕ ದೇಹದಲ್ಲಿ ರಕ್ತಹೀನತೆ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ. ಜತೆಗೆ ದೇಹದಲ್ಲಿನ ಹೆಚ್ಚುವರಿ ಬೊಜ್ಜು ನಿವಾರಣೆಗೆ ಇದು ಸಹಾಯ ಮಾಡುತ್ತದೆ. ಇದು ಕಡಿಮೆ ಪ್ರಮಾಣದ ಕ್ಯಾಲೊರಿ ಹೊಂದಿದ್ದು, ದೇಹದ ತೂಕ ಇಳಿಸಿಕೊಳ್ಳಲು ಸಹಾಯಕವಾಗಿದೆ. ಇದು ಹಲವು ರೋಗಗಳಿಗೂ ಔಷಧಿಯ ಖಜಾನೆಯಂತಿದೆ.

ಹೃದಯದ ಸಮಸ್ಯೆ ಪರಿಹಾರ
ದಾಳಿಂಬೆ ಹಣ್ಣಿನಲ್ಲಿ ಆ್ಯಂಟಿ ಆಕ್ಸಿಡೆಂಟ್ ಅಂಶಗಳು ಹೇರಳವಾಗಿ ಇರುವ ಕಾರಣ ಹೃದಯಕ್ಕೆ ಮಾರಕ ಎನಿಸುವ ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಉತ್ತಮ ಪರಿಹಾರ ಕಾರ್ಯನಿರ್ವಹಿಸುತ್ತದೆ ಮತ್ತು ಇದು ದೇಹದಲ್ಲಿ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡುತ್ತದೆ.

ನಮ್ಮ ಮಾನಸಿಕ ಒತ್ತಡವನ್ನು ನಿವಾರಣೆ ಮಾಡುವ ಮೂಲಕ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಿ ರಕ್ತದ ಒತ್ತಡವನ್ನು ನಿಯಂತ್ರಣಕ್ಕೆ ತರುವ ಮೂಲಕ ಹೃದಯದ ಆರೋಗ್ಯಕ್ಕೆ ಅನುಕೂಲವಾಗುವಂತಹ ಗುಣಲಕ್ಷಣಗಳು ದಾಳಿಂಬೆ ಹಣ್ಣಿನ ಸಿಪ್ಪೆಯಲ್ಲಿ ಕಂಡುಬರುತ್ತದೆ. ದಾಳಿಂಬೆ ಹಣ್ಣಿನ ಪುಡಿಯನ್ನು ಒಂದು ಗ್ಲಾಸ್ ಬೆಚ್ಚಗಿನ ನೀರಿನಲ್ಲಿ ಹಾಕಿ ದಿನ ಬಿಟ್ಟು ದಿನ ಸೇವಿಸುವುದರಿಂದ ಹೃದಯವು ಆರೋಗ್ಯಯುತವಾಗಿರುತ್ತದೆ.

ಅಜೀರ್ಣದ ಸಮಸ್ಯೆ ಪರಿಹಾರ
ಸಾಮಾನ್ಯವಾಗಿ ಮಕ್ಕಳಲ್ಲಿ ಹಾಗೂ ದೊಡ್ಡವರಲ್ಲಿ ಕಂಡುಬರುವ ಅಜೀರ್ಣದ ಸಮಸ್ಯೆಗೆ ದಾಳಿಂಬೆ ಸಿಪ್ಪೆಯು ಉತ್ತಮ ಔಷಧವಾಗಿದ್ದು, ಅತಿಸಾರ ಭೇದಿ ಉಂಟಾದಾಗ ಅಥವಾ ರಕ್ತ ಭೇದಿ ಸಮಸ್ಯೆ ಉಂಟಾದಾಗ ಒಣಗಿಸಿದ ದಾಳಿಂಬೆಯ ಸಿಪ್ಪೆಯನ್ನು ಲಿಂಬೆ ಹಣ್ಣಿನಲ್ಲಿ ತೇದಿ ಚೂರ್ಣವಾಗಿ ಮಾಡಿ ಸೇವಿಸುವುದರಿಂದ ಅತಿಸಾರದ ಸಮಸ್ಯೆ ಶೀರ್ಘವಾಗಿ ಗುಣಮುಖವಾತ್ತದೆ.

ಚರ್ಮದ ಕ್ಯಾನ್ಸರ್ ತಡೆಗಟ್ಟಲಿದೆ
ದಾಳಿಂಬೆ ಬೀಜಗಳಿಂದ ಎಣ್ಣೆಯನ್ನೂ ತೆಗೆಯಬಹುದು. ಇದರಲ್ಲಿ ಪ್ಯೂನಿಕ್ ಆಮ್ಲದಲ್ಲಿ ಸಮೃದ್ಧವಾಗಿರುತ್ತದೆ. ಇದು ಇತರೆ ಹಣ್ಣುಗಳಲ್ಲಿ ಇರುವುದಿಲ್ಲ. ಈ ಎಣ್ಣೆಯಲ್ಲಿ ಈಸ್ಟ್ರೊಜೆನ್ ಅಧಿಕವಾಗಿರಲಿದ್ದು, ಈಸ್ಟ್ರೊಜೆನ್ ಮಟ್ಟ ಕಡಿಮೆ ಇರುವ ಋತುಬಂಧಕ್ಕೊಳಗಾದ ಮಹಿಳೆಯರಿಗೆ ನೀಡಬಹುದು. ಈ ಬೀಜಗಳು UV ಮತ್ತು AV ಕಿರಣಗಳಿಂದ ನಮ್ಮನ್ನು ರಕ್ಷಿಸುತ್ತದೆ ಎಂಬುದನ್ನು ಅಧ್ಯಯನಗಳು ಸಾಬೀತುಪಡಿಸುತ್ತವೆ, ಆದ್ದರಿಂದ ಇದು ಚರ್ಮದ ಕ್ಯಾನ್ಸರ್’ನ್ನು ತಡೆಗಟ್ಟಲಿದೆ.

ನೈಸರ್ಗಿಕ ಕಾಮೋತ್ತೇಜಕ
ಈ ಬೀಜಗಳು ಮನೋಭಾವ ಹಾಗೂ ರಕ್ತಪರಿಚಲನೆಯ ಮೇಲೆ ನೇರವಾದ ಪ್ರಭಾವ ಬೀರುತ್ತದೆ. ವಿಶೇಷವಾಗಿ ಇವುಗಳ ಸೇವನೆಯಿಂದ ಜನನಾಂಗಗಳಲ್ಲಿ ರಕ್ತಪರಿಚಲನೆ ಹೆಚ್ಚುವ ಮೂಲಕ ನಿಮಿರು ದೌರ್ಬಲ್ಯ ಕಡಿಮೆಯಾಗುತ್ತದೆ. ಅಲ್ಲದೇ ಪುರುಷರಲ್ಲಿ ಟೆಸ್ಟ್ರೋಸ್ಟೆರಾನ್ ರಸದೂತದ ಮಟ್ಟವನ್ನು ಏರಿಸುವ ಮೂಲಕ ಕಾಮೋತ್ಸಾಹವನ್ನೂ ಹೆಚ್ಚಿಸುತ್ತದೆ.

ದಾಳಿಂಬೆ ಹಣ್ಣಿನ ಜ್ಯೂಸ್ ಪುರುಷರಲ್ಲಿ ಎದುರಾಗುವ ಹಲವಾರು ಲೈಂಗಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. ಮುಖ್ಯವಾಗಿ ಲೈಂಗಿಕ ಪ್ರಕ್ರಿಯೆಯ ಸಂದರ್ಭದಲ್ಲಿ ಹೆಚ್ಚು ಕಾಲ ತೊಡಗಿಸಿಕೊಳ್ಳಲು ದಾಳಿಂಬೆ ಹಣ್ಣು ನೆರವಾಗುತ್ತದೆ.

ಸಂಧಿವಾತ ಕಡಿಮೆ ಮಾಡುತ್ತದೆ
ದಾಳಿಂಬೆಯ ಬೀಜಗಳಲ್ಲಿರುವ ಫ್ಲೇವನಾಲ್ ಎಂಬ ಆ್ಯಂಟಿ ಆಕ್ಸಿಡೆಂಟ್ ಗಳು ಸಂಧಿವಾತದ ನೋವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಇವುಗಳು ಉರಿಯೂತ ನಿವಾರಕಗಳಾಗಿ ಕಾರ್ಯನಿರ್ವಹಿಸುವ ಮೂಲಕ ದೇಹದ ಹಲವು ನೋವುಗಳನ್ನು ಕಡಿಮೆ ಮಾಡುತ್ತವೆ. ಒಂದು ವೇಳೆ ಸಂಧಿವಾತದ ತೊಂದರೆ ಇದ್ದರೆ ದಾಳಿಂಬೆಯ ಬೀಜಗಳನ್ನು ನಿತ್ಯವೂ ಕೊಂಚಕೊಂಚವಾಗಿ ಸೇವಿಸುತ್ತಾ ಬರಬೇಕು.

ಮಧುಮೇಹಿಗಳಿಗೂ ಸೂಕ್ತ
ದಾಳಿಂಬೆಯ ಬೀಜಗಳು ಮಧುಮೇಹಿಗಳಿಗೂ ಸೂಕ್ತವಾಗಿವೆ. ಇದರಲ್ಲಿರುವ ಕೆಲವು ಆಮ್ಲಗಳು ಮಧುಮೇಹದ ವಿರುದ್ದ ಕಾರ್ಯನಿರ್ವಹಿಸುವ ಗುಣ ಹೊಂದಿವೆ. ಇದರಲ್ಲಿರುವ ಸಕ್ಕರೆಗಳಲ್ಲಿ ಕೆಲವು ವಿಶಿಷ್ಟ ಆ್ಯಂಟಿ ಅಕ್ಸಿಡೆಂಟುಗಳಿದ್ದು ವಿಶೇಷವಾಗಿ ಟೈಪ್ 2 ಮಧುಮೇಹವನ್ನು ತಡೆಗಟ್ಟುವ ಶಕ್ತಿ ಹೊಂದಿದೆ.

ಉರಿಯೂತ ಕಡಿಮೆ ಮಾಡಲಿದೆ
ದಾಳಿಂಬೆ ಬೀಜಗಳನ್ನು ನಿಯಮಿತವಾಗಿ ಸೇವಿಸುತ್ತಾ ಬರುವ ಮೂಲಕ ದೇಹದಲ್ಲಿ ಎದುರಾಗುವ ಉರಿಯೂತ ಮತ್ತು ಇತರ ಸಂಬಂಧಿತ ತೊಂದರೆಗಳಿಂದ ರಕ್ಷಣೆ ಒದಗುತ್ತದೆ. ಈ ಬಗ್ಗೆ ನಡೆದ ಅಧ್ಯಯನಗಳ ಮೂಲಕ ಫ್ರೀ ರ್ಯಾಡಿಕಲ್ ಎಂಬ ಕಣಗಳ ಉತ್ಕರ್ಷಣಶೀಲ ಘರ್ಷಣೆಯನ್ನು ತಡೆಯುವ ಕ್ಷಮತೆಯನ್ನು ದಾಳಿಂಬೆ ಬೀಜಗಳು ಹೊಂದಿವೆ.

ಒಸಡುಗಳನ್ನು ದೃಢಗೊಳಿಸುತ್ತದೆ
ನಿಯಮಿತವಾಗಿ ದಾಳಿಂಬೆ ಬೀಜಗಳನ್ನು ಸೇವಿಸುವ ಮೂಲಕ ಒಸಡುಗಳು ದೃಢಗೊಳ್ಳುತ್ತವೆ ಹಾಗೂ ಸಡಿಲವಾದ ಹಲ್ಲುಗಳು ಗಟ್ಟಿಯಾಗುತ್ತವೆ. ಅಲ್ಲದೇ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳನ್ನು ನಿವಾರಿಸಲು ಈ ಬೀಜಗಳಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣ ನೆರವಾಗುತ್ತದೆ.

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ
ಈ ಬೀಜಗಳ ಸೇವನೆಯಿಂದ ಜೀರ್ಣಾಂಗಗಳ ಕ್ಷಮತೆ ಹೆಚ್ಚುತ್ತದೆ. ಇದಕ್ಕೆ ಇದರಲ್ಲಿರುವ ಬಿ-ಕಾಂಪ್ಲೆಕ್ಸ್ ವಿಟಮಿನ್ನುಗಳು ಕಾರಣ. ಈ ವಿಟಮಿನ್ನುಗಳು ದೇಹದಲ್ಲಿರುವ ಕೊಬ್ಬು, ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟುಗಳನ್ನು ಶಕ್ತಿಯನ್ನಾಗಿ ಪರಿವರ್ತಿಸಲು ನೆರವಾಗುತ್ತವೆ. ದಾಳಿಂಬೆ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಕರಗದ ನಾರು ಜೀರ್ಣಕ್ರಿಯೆಗೆ ಸಹಕರಿಸುವ ಮೂಲಕ ಜೀರ್ಣಕ್ರಿಯೆ ಸುಲಭವಾಗಲು ನೆರವಾಗುತ್ತದೆ.

ತೂಕ ಇಳಿಕೆಗೆ ಸಹಕಾರಿ
ತೂಕ ಇಳಿಸುವ ಪ್ರಯತ್ನಲ್ಲಿದ್ದವರಿಗೆ ದಾಳಿಂಬೆ ಬೀಜಗಳು ವರದಾನವಾಗಿವೆ. ಇವುಗಳಲ್ಲಿರುವ ಕರಗದ ನಾರು ಹೆಚ್ಚಿನ ಹೊತ್ತು ಹೊಟ್ಟೆ ತುಂಬಿರುವ ಭಾವನೆ ಮೂಡಿಸಿ ಅನಗತ್ಯ ಆಹಾರ ಸೇವನೆಯಿಂದ ತಡೆಯುತ್ತದೆ. ಅಲ್ಲದೇ ಇವುಗಳನ್ನು ಜೀರ್ಣಿಸಿಕೊಳ್ಳಲು ಹೆಚ್ಚಿನ ಕೊಬ್ಬನ್ನು ಬಳಸುವ ಮೂಲಕ ಸ್ಥೂಲಕಾಯದಿಂದ ಬಿಡುಗಡೆ ನೀಡುತ್ತದೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಇದರಲ್ಲಿರುವ ಪ್ರಬಲ ಆಂಟಿ ಆಕ್ಸಿಡೆಂಟುಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತವೆ ಈ ಬೀಜಗಳು ಬ್ಯಾಕ್ಟೀರಿಯಾ ಹಾಗೂ ವೈರಸ್ಸುಗಳನ್ನು ಕೊಂದು ಹಲವಾರು ರೋಗಗಳಿಂದ ರಕ್ಷಣೆ ಒದಗಿಸುತ್ತವೆ. ತನ್ಮೂಲಕ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.

ಗರ್ಭಿಣಿಯರಿಗೆ ಒಳ್ಳೆಯದು
ದಾಳಿಂಬೆಯಲ್ಲಿ ಕಬ್ಬಿಣದ ಅಂಶವು ಸಮೃದ್ಧವಾಗಿದೆ. ಇದು ಕಬ್ಬಿಣದ ಕೊರತೆಯನ್ನು ತಡೆಯಲು ಗರ್ಭಿಣಿಯರಿಗೆ ಸಹಾಯ ಮಾಡುತ್ತದೆ.

ಗಂಟಲು ಸಮಸ್ಯೆಗೆ ಪರಿಹಾರ
ಸಾಮಾನ್ಯವಾಗಿ ಹಲವರನ್ನು ಕಾಡುವ ಗಂಟಲು ಸಮಸ್ಯೆಗೆ ದಾಳಿಂಬೆ ಮದ್ದಾಗಿದ್ದು, ಗಂಟಲು ನೋವು, ಗಂಟಲು ಕಿರಿಕಿರಿ, ಇತ್ಯಾದಿಗಳಿಗೆ ದಾಳಿಂಬೆ ಹಣ್ಣಿನ ಪುಡಿಯನ್ನು ಬಳಕೆ ಮಾಡಬಹುದು.
ಒಂದು ಹಿಡಿ ದಾಳಿಂಬೆ ಹಣ್ಣಿನ ಒಣಗಿದ ಪುಡಿಯನ್ನು ತೆಗೆದುಕೊಂಡು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ಇದನ್ನು ಸೋಸಿಕೊಂಡು ಬಾಯಿ ಮುಕ್ಕಳಿಸಿದರೆ ಗಂಟಲು ನೋವು ಮತ್ತು ಗಂಟಲಿನ ಸಮಸ್ಯೆಗಳು ಉಪಶಮನವಾಗುತ್ತದೆ.

ಚರ್ಮದ ಆರೋಗ್ಯ ವೃದ್ಧಿ
ದಾಳಿಂಬೆ ಸೇವನೆಯಿಂದ ಚರ್ಮದ ಆರೋಗ್ಯ ವೃದ್ಧಿಯಾಗುತ್ತದೆ. ಇದರಿಂದ ಮುಖದ ಕಾಂತಿ ಹೆಚ್ಚಿಸಿಕೊಳ್ಳಬಹುದು. ಚರ್ಮದಲ್ಲಿನ ಕಪ್ಪು ಕಲೆ, ಮುಖದಲ್ಲಿನ ಎಣ್ಣೆಯಾಂಶ ಹೋಗಲಾಡಿಸಲು ದಾಳಿಂಬೆ ಸಹಾಯಕಾರಿ ಹಾಗೂ ವಿವಿಧ ಚರ್ಮದ ಸಮಸ್ಯೆಗಳಿಗೂ ದಾಳಿಂಬೆ ಸೇವನೆಯಿಂದ ಪರಿಹಾರ ಕಂಡುಕೊಳ್ಳಬಹುದು. ಜೊತೆಗೆ ದಾಳಿಂಬೆಯು ಮೊಡವೆಗಳನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ. ದಾಳಿಂಬೆ ಬೀಜಗಳನ್ನು ಅರಿಶಿನದೊಂದಿಗೆ ಪುಡಿಮಾಡಿ ಮೊಡವೆಗಳಾಗಿರುವ ಸ್ಥಳಕ್ಕೆ ಲೇಪಿಸಿದರೆ ಮೊಡವೆ ನಿವಾರಣೆಯಾಗುತ್ತದೆ. ಹಾಗೂ ದಾಳಿಂಬೆ ಹಣ್ಣಿನಲ್ಲಿರುವ ಮಿಟಮಿನ್ಗಳು ಕೂದಲಿನ ನೈಸರ್ಗಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಕಪ್ಪು ಮತ್ತು ಉದ್ದನೆಯ ಕೂದಲು ಬೆಳೆಯಲು ದಾಳಿಂಬೆ ನೆರವಾಗುತ್ತದೆ. ಕೂದಲು ಸೀಳುವುದು, ಮತ್ತು ಕೂದಲು ಉದುರುವುದನ್ನು ತಡೆಯುತ್ತದೆ.

ನಿಮ್ಮ ರಕ್ತವನ್ನು ತೆಳುಗೊಳಿಸುತ್ತದೆ
ದಾಳಿಂಬೆಯಲ್ಲಿರುವ ಆಂಟಿ ಆಕ್ಸಿಡೆಂಟ್ಗಳು ನಿಮ್ಮ ರಕ್ತವನ್ನು ತೆಳುವಾಗುವಂತೆ ಕಾರ್ಯ ನಿರ್ವಹಿಸುತ್ತವೆ.
ದಾಳಿಂಬೆ ಬೀಜಗಳು ನಿಮ್ಮ ರಕ್ತದ ಪ್ಲೇಟ್ಲೆಟ್ಗಳು ಹೆಪ್ಪು ಗಟ್ಟುವುದನ್ನು ತಡೆಯುತ್ತದೆ.
ಅಲ್ಲದೆ, ದಾಳಿಂಬೆಯ ಸೇವನೆಯಿಂದ ಗಾಯವನ್ನು ಗುಣಪಡಿಸುತ್ತದೆ.
ಹೃದಯ, ಅಪಧಮನಿಗಳು ಅಥವಾ ಆಂತರಿಕ ಹೆಪ್ಪುಗಟ್ಟುವಿಕೆಯಿಂದ ಕಾಪಾಡುತ್ತದೆ.

ದಾಳಿಂಬೆ ಕಬ್ಬಿಣದ ಖಜಾನೆ
ಮಾನವನ ದೇಹದಲ್ಲಿ ಹೆಚ್ಚಿನ ಶಕ್ತಿ ತುಂಬಲು ರಕ್ತದಲ್ಲಿ ಕಬ್ಬಿಣದ ಅಂಶ( Iron content) ಇರುವುದು ತುಂಬಾ ಮುಖ್ಯ. ಕಬ್ಬಿಣದ ಅಂಶ ಕಡಿಮೆಯಾದರೆ ದಾಳಿಂಬೆ ವೈದ್ಯರು ತಿನ್ನಲು ಸಲಹೆ ನೀಡುತ್ತಾರೆ. ಇದರಲ್ಲಿ ಕಬ್ಬಿಣದ ಅಂಶ ತುಂಬಾ ಹೆಚ್ಚಿರುವುದರಿಂದ ದಾಳಿಂಬೆ ಆರೋಗ್ಯದ ದೃಷ್ಟಿಯಿಂದ ಅತ್ಯುತ್ತಮ ಆಯ್ಕೆಯಾಗಿದೆ. ಪಾಲಾಕ್ ಸೇರಿ ವಿವಿಧ ಸೊಪ್ಪುಗಳಲ್ಲಿಯೂ ಕಬ್ಬಿಣದ ಅಂಶ ಹೆಚ್ಚಿರುತ್ತದೆ. ಆದರೆ ಸೊಪ್ಪನ್ನು ನೇರವಾಗಿ ಸೇವಿಸಲು ಸಾಧ್ಯವಿಲ್ಲ. ಬೇಯಿಸಿದ ಬಳಿಕ ಹಲವು ಪೌಷ್ಟಿಕಾಂಶಗಳು ನಷ್ಟವಾಗುವ ಕಾರಣ, ನೇರವಾಗಿ ತಿನ್ನಬಹುದಾದ ದಾಳಿಂಬೆ ಅತಿ ಸೂಕ್ತವಾಗಿದೆ.

ಮಾರಕ ಕ್ಯಾನ್ಸರ್’ಗೆ ರಾಮಬಾಣ
ದಾಳಿಂಬೆ (Pomegranate) ಹಣ್ಣುಗಳಲ್ಲಿ ಹಲವಾರು ಆಂಟಿ ಆಕ್ಸಿಡೆಂಟುಗಳು ಇರುತ್ತವೆ. ಇವು ಪೌಷ್ಠಿಕಾಂಶವನ್ನು ನೀಡುವ ಮೂಲಕ ದೇಹದ ಶಕ್ತಿಯನ್ನು ಹೆಚ್ಚಿಸುತ್ತವೆ. ಆದ್ದರಿಂದ ಕ್ಯಾನ್ಸರ್ ವಿರುದ್ಧ ದೇಹ ಹೋರಾಡಲು ಸಹಾಯಕವಾಗುತ್ತದೆ. ದಾಳಿಂಬೆ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಕಡಿಮೆ ಮಾಡುತ್ತದೆ. ಇದರ ಗುಣಲಕ್ಷಣಗಳು ಪ್ರಾಸ್ಟೇಟ್ ಮತ್ತು ಸ್ತನ ಕ್ಯಾನ್ಸರ್ ಕೋಶಗಳನ್ನು ಹೆಚ್ಚಿಸುವುದನ್ನು ತಡೆಯುತ್ತದೆ. ಕ್ಯಾನ್ಸರ್ ಇದ್ದವರು ಅಥವಾ ಕ್ಯಾನ್ಸರ್ (Cancer)ಲಕ್ಷಣಗಳು ಗೋಚರಿಸುತ್ತಿದ್ದವರು ದಾಳಿಂಬೆಯನ್ನು ನಿಯಮಿತವಾಗಿ ಸೇವಿಸುವುದರಿಂದ ಕ್ಯಾನ್ಸರ್ ಆಗಮನವನ್ನು ದೂರವಿಡಬಹುದು.

ಸುಲಭಗೊಳ್ಳುವ ವಿಸರ್ಜನೆ
ದಾಳಿಂಬೆ ಹಣ್ಣಿನಲ್ಲಿ ಸುಲಭವಾಗಿ ಕರಗದ ನಾರಿನಂಶವಿರುವ ಕಾರಣ ಕರುಳಿನಲ್ಲಿ ಪಚನಕ್ರಿಯೆಯ ನಂತರ ತ್ಯಾಜ್ಯಗಳೊಂದಿಗೆ ಸುಲಭವಾಗಿ ಮಿಳಿತಗೊಂಡು ಸುಖವಿಸರ್ಜನೆಗೆ ಸಹಾಯ ಮಾಡುತ್ತದೆ. ಈ ನಾರು ದಾಳಿಂಬೆ ಕಾಳಿನ ಒಳಗಿನ ಬೀಜದಲ್ಲಿ ಶೇಖರವಾಗಿದ್ದು ಪ್ರತಿದಿನದ ಬಹಿರ್ದೆಶೆಗೆ ನೆರವಾಗುತ್ತದೆ.

ನರಗಳ ಒಳಗೆ ಶೇಖರವಾಗಿರುವ ಕೆಟ್ಟ ಕೊಲೆಸ್ಟ್ರಾಲ್ ತೊಲಗಿಸುತ್ತದೆ
ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ (LDL-low density lipids) ಶೇಖರಣೆ ಹೆಚ್ಚುತ್ತಿದ್ದಂತೆ ನರಗಳು ತಿರುವಿದೆಡೆಯಲ್ಲಿ, ಕವಲಿನ ನಡುವಣ ಭಾಗದಲ್ಲಿ ಶೇಖರಗೊಂಡು ರಕ್ತದ ಮೂಲಕ ಬಳಿಕ ಆಗಮನವಾಗುವ ಕೊಲೆಸ್ಟ್ರಾಲ್ ಅನ್ನು ಅಂಟಿಸಿಕೊಂಡು ನರಗಳ ಒಳಭಾಗವನ್ನು ಒತ್ತುತ್ತಾ ಬರುತ್ತದೆ. ಪರಿಣಾಮವಾಗಿ ಹೃದಯಕ್ಕೆ ಈ ಭಾಗದಿಂದ ರಕ್ತವನ್ನು ಸರಬರಾಜು ಮಾಡಲು ಹೆಚ್ಚಿನ ಒತ್ತಡ ನೀಡಬೇಕಾಗುತ್ತದೆ. ನೈಸರ್ಗಿಕವಾಗಿ ಸಿಗುವ ಆಂಟಿ ಆಕ್ಸಿಡೆಂಟುಗಳು ಈ ಗಂಟುಗಳನ್ನು ಕರಗಿಸಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಅಲ್ಲಿಂದ ತೊಲಗಿಸಲು ಸಹಾಯ ಮಾಡುತ್ತದೆ. ಹಸಿರು ಚಹಾದಲ್ಲಿ (ಗ್ರೀನ್ ಟೀ) ಆಂಟಿ ಆಕ್ಸಿಡೆಂಟುಗಳು ಹೇರಳವಾಗಿದ್ದರೂ ದಾಳಿಂಬೆಯಲ್ಲಿ ಇನ್ನೂ ಹೆಚ್ಚಿನ ಆಂಟಿ ಆಕ್ಸಿಡೆಂಟುಗಳಿವೆ. ತಾಜಾ ದಾಳಿಂಬೆ ಹಣ್ಣುಗಳನ್ನು ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ದೂರವಾಗಿ ಆರೋಗ್ಯ ವೃದ್ಧಿಸುತ್ತದೆ.

ಪಿತ್ತಜನಕಾಂಗದ ಬೆಳವಣಿಗೆಗೆ ಸಹಾಯ
ನಮ್ಮ ದೇಹದಲ್ಲಿನ ಅಂಗಗಳಲ್ಲಿ ಒಂದು ಭಾಗ ದಾನ ಮಾಡಿದ ಬಳಿಕ ಮತ್ತೆ ಬೆಳೆಯುವ ಅಂಗವೆಂದರೆ ಪಿತ್ತಜನಕಾಂಗ ಮಾತ್ರ. ಈ ಬೆಳವಣಿಗೆಗೆ glutathione ಎಂಬ ಕಿಣ್ವ ಅಗತ್ಯ. ದಾಳಿಂಬೆಯಲ್ಲಿರುವ ellagic acid ಎಂಬ ಅಂಶ glutathione ಕಿಣ್ವವನ್ನು ಹೆಚ್ಚು ಹೆಚ್ಚಾಗಿ ದೇಹ ಉತ್ಪಾದಿಸಿಕೊಳ್ಳಲು ನೆರವಾಗುತ್ತದೆ. ಪರಿಣಾಮವಾಗಿ ಪಿತ್ತಜನಕಾಂಗ ಶೀಘ್ರವೇ ತನ್ನ ಮೂಲಸ್ವರೂಪ ಪಡೆಯುತ್ತದೆ. ಹೆಚ್ಚಾಗಿ ಮದ್ಯಪಾನಿಗಳಲ್ಲಿ ಪಿತ್ತಜನಕಾಂಗ ಬಾಧೆಗೊಳಗಾಗಿದ್ದು ದಾಳಿಂಬೆಯ ಸೇವನೆ ಪರಿಣಾಮಕಾರಿಯಾಗಿದೆ.

ಮೂತ್ರಪಿಂಡಗಳನ್ನು ಸ್ವಚ್ಛಗೊಳಿಸುತ್ತದೆ.
ದಾಳಿಂಬೆಯಲ್ಲಿರುವ polyphenols, anthocyanins ಮತ್ತು tannins ಎಂಬ ಕಿಣ್ವಗಳು ಮೂತ್ರಪಿಂಡಗಳ ಕೆಲಸಕ್ಕೆ ನೆರವಾಗುತ್ತವೆ. ಪರಿಣಾಮವಾಗಿ ರಕ್ತ ಪರಿಶುದ್ಧಗೊಂಡು ದೇಹದ ವಿಷಕಾರಕ ವಸ್ತುಗಳು ಮೂತ್ರದ ಮೂಲಕ ಹೊರಹಾಕಲ್ಪಡುತ್ತವೆ.

ಅಲರ್ಜಿಗೆ ನೈಸರ್ಗಿಕ ಪ್ರತಿರೋಧಿಯಾಗಿದೆ
ಹಲವರಿಗೆ ಕೆಲವು ವಸ್ತುಗಳಿಂದ ಅಲರ್ಜಿಯುಂಟಾಗುತ್ತದೆ. ಹೂವಿನ ಪರಾಗ, ಕೀಟಗಳ ಕಚ್ಚುವಿಕೆ, ಕೆಲವು ಗಿಡಗ ಮುಳ್ಳುಗಳು, ಎಲೆ ತುಂಡಾದರೆ ಒಸರುವ ಹಾಲಿನಂತಹ ದ್ರವ ಮೊದಲಾದವು ಅಲರ್ಜಿ ಉಂಟುಮಾಡುತ್ತವೆ. ಈ ಅಲರ್ಜಿಗಳನ್ನು ಎದುರಿಸಲು ದೇಹ ಅದಕ್ಕೆ ಕಾರಣವಾದ ಅಲರ್ಜಿಕಾರಕ ವಸ್ತುವಿಗೆ ಪ್ರತಿರೋಧಿಯನ್ನು ಸೃಷ್ಟಿಸಿಕೊಳ್ಳಬೇಕು. ದಾಳಿಂಬೆಯಲ್ಲಿರುವ polyphenol ಎಂಬ ಕಿಣ್ವ ಈ ಪ್ರತಿರೋಧಿಯನ್ನು ಸೃಷ್ಟಿಸಲು ನೆರವಾಗುತ್ತದೆ. ಪರಿಣಾಮವಾಗಿ ದೇಹ ಅಲರ್ಜಿಯಿಂದ ಶೀಘ್ರ ಹೊರಬರುತ್ತದೆ.

100 ಗ್ರಾಂ ದಾಳಿಂಬೆಯಲ್ಲಿ ಪೋಷಕಾಂಶ ಎಷ್ಟಿರುತ್ತದೆ…?
ಕಾರ್ಬೋಹೈಡ್ರೇಟ್ಗಳು: 18.70 ಗ್ರಾಂ
ಪ್ರೋಟೀನ್: 1.67 ಗ್ರಾಂ
ಕೊಬ್ಬು: 1.2 ಗ್ರಾಂ
ಸಕ್ಕರೆ: 14 ಗ್ರಾಂ
ಫೈಬರ್: 7 ಗ್ರಾಂ

ದಾಳಿಂಬೆಯನ್ನು ಸೇವಿಸುವ ವಿಧಾನ ಹೇಗೆ…?
• ದಾಳಿಂಬೆಯನ್ನು ಸಲಾಡ್, ಜ್ಯೂಸ್, ಇಲ್ಲ ಹಾಗೇ ಕೂಡ ಸೇವಿಸಬಹುದು.
• ಬೀಜಗಳಂತಿರುವ ದಾಳಿಂಬೆಯನ್ನು ಹಲವಾರು ಪಾಕಪದ್ಧತಿಯಲ್ಲೂ ಉಪಯೋಗಿಸುತ್ತಾರೆ.
• ಸಿರಪ್ ಮಾಡಲು, ಕೆಲವರು ಪಚಡಿಯಂತಹ ರೆಸಿಪಿಗಳಿಗೆ ಸೇರಿಸುತ್ತಾರೆ.
• ಇದು ಐಸ್ ಕ್ರೀಮ್ ಟಾಪಿಂಗ್ ಆಗಿಯೂ ಉತ್ತಮವಾಗಿರುತ್ತದೆ.

ಯಾರೆಲ್ಲಾ ಸೇವಿಸಬಹುದು?
ದಾಳಿಂಬೆ ಹಣ್ಣನ್ನು ಇಂತಹವರು ಮಾತ್ರ ಸೇವಿಸಬೇಕೆಂದೇನೂ ಇಲ್ಲ. ಪ್ರತಿಯೊಬ್ಬರೂ ಈ ಹಣ್ಣನ್ನು ಸೇವಿಸಬಹುದು. ಹಣ್ಣಿನಲ್ಲಿ ಯಾವುದೇ ಹಾನಿಕಾರಕ ಅಂಶಗಳಿಲ್ಲ.
ಆದರೆ, ಮಧುಮೇಹ ರೋಗಿಗಳು ಈ ಹಣ್ಣನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸದಂತೆ ಸಲಹೆ ನೀಡಲಾಗುತ್ತದೆ. ಹಣ್ಣಿನಲ್ಲಿ ಸುಕ್ರೋಸ್, ಗ್ಲೂಕೋಸ್ ಮತ್ತು ಫ್ರಕ್ಟೋಸ್‌ನಂತಹ ಸಕ್ಕರೆಯ ಅಂಶಗಳಿರುವುದು ಇದಕ್ಕೆ ಕಾರಣವಾಗಿದೆ. ಹೀಗಾಗಿ ಮಧುಮೇಹ ಅಥವಾ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರು ತಜ್ಞರು, ವೈದ್ಯರ ಸಲಹೆ ಮೇರೆಗೆ ಹಣ್ಣನ್ನು ಸೇವನೆ ಮಾಡಬಹುದು.


Share News

Leave a Reply

Your email address will not be published. Required fields are marked *