Breaking News

ನೆಲ್ಲಿಕಾಯಿಯಲ್ಲಿ ಇರುವ ಔಷಧೀಯ ಗುಣಗಳು ಯಾವುವು..!

Share News

ನೆಲ್ಲಿಕಾಯಿ ಎಂದಾಕ್ಷಣ ಎಲ್ಲರ ಬಾಯಲ್ಲೂ ನೀರೂರುತ್ತದೆ. ಇದು ಹೆಚ್ಚಾಗಿ ಮಲೆನಾಡಿನ ಬೆಟ್ಟದ ಪ್ರದೇಶದಲ್ಲಿ ಕಂಡುಬರುತ್ತದೆ. ಆದ್ದರಿಂದ ಇದನ್ನು ಬೆಟ್ಟದ ನೆಲ್ಲಿಕಾಯಿ ಎಂದು ಕರೆಯುತ್ತಾರೆ. ಮುಖ್ಯವಾಗಿ ನೆಲ್ಲಿಕಾಯಿಯನ್ನು ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುತ್ತದೆ. ನೆಲ್ಲಿಕಾಯಿಯನ್ನು ಆಹಾರದಲ್ಲೂ ಉಪಯೋಗಿಸುತ್ತಾರೆ. ಹಾಗು ಇದನ್ನು ಹಬ್ಬದ ದಿನಗಳಲ್ಲಿ, ಅಂದರೆ ದೀಪಾವಳಿ ಮತ್ತು ಕಾರ್ತೀಕ ಮಾಸದ ತುಳಸಿ ಮದುವೆಗಳಲ್ಲಿ ನೆಲ್ಲಿಕಾಯಿಗೆ ತುಂಬಾ ಮಹತ್ವವಿದೆ. ನೆಲ್ಲಿಕಾಯಿಯು ಕಿತ್ತಳೆ ಹಣ್ಣಿಗಿಂತ 20 ಪಟ್ಟು ಹೆಚ್ಚು “ಸಿ” ಜೀವಸತ್ವವನ್ನು ಹೊಂದಿರುತ್ತದೆ.

ನಮ್ಮನ್ನು ಬಾಧಿಸುವ ಅನೇಕ ಕಾಯಿಲೆಗಳಿಗೆ ನೆಲ್ಲಿಕಾಯಿ ರಾಮಬಾಣ. ಹಿಂದಿನ ಕಾಲದಲ್ಲಿ ಇದರ ಮಹತ್ವ ಅರಿತ ಹಿರಿಯರು ಅನೇಕ ಔಷಧಿಗಳಾಗಿ ನೆಲ್ಲಿಕಾಯಿಗಳನ್ನು ಬಳಸುತ್ತಿದ್ದರು. ಇದರಲ್ಲಿರುವ ವಿಟಮಿನ್ ಸಿ ಅಂಶ ಔಷಧೀಯ ರೂಪದಲ್ಲಿ ಕಾರ್ಯ ನಿರ್ವಹಿಸುತ್ತದೆ. ಹವಾಮಾನ ಬದಲಾವಣೆಯಿಂದ ಕಂಡು ಬರುವ ಹಾರ್ಮೋನ್ನಲ್ಲಿನ ವ್ಯತ್ಯಾಸವನ್ನು ಸರಿದೂಗಿಸಲು ಹಾಗೂ ಶೀತ ಅಥವಾ ಕೆಮ್ಮನ್ನು ದೂರ ಮಾಡಲು ನೆಲ್ಲಿಕಾಯಿ ಸೇವನೆ ಉತ್ತಮ ಎನ್ನಲಾಗುತ್ತದೆ.

ನೆಲ್ಲಿಕಾಯಿ (Amla) ಯಲ್ಲಿ ವಿಟಮಿನ್ ಸಿ, ಪೊಟ್ಯಾಶಿಯಮ್, ಕ್ಯಾಲ್ಶಿಯಮ್, ಐರನ್ ಮತ್ತು ಎಂಟಿ ಆಕ್ಸಿಡೆಂಟ್ ಮುಂತಾದ ಪೋಷಕಾಂಶಗಳು ಹೇರಳವಾಗಿದೆ. ಈ ಎಲ್ಲ ಪೌಷ್ಠಿಕ ಸತ್ವಗಳು ಶರೀರವನ್ನು ಅನೇಕ ರೋಗದಿಂದ ದೂರಮಾಡುತ್ತವೆ. ಇದನ್ನು ಹಲವು ವಿಧದಲ್ಲಿ ಸೇವಿಸಲಾಗುತ್ತದೆ. ನೆಲ್ಲಿಕಾಯಿಯನ್ನು ಹಸಿಯಾಗಿ ಅಥವಾ ಒಣಗಿಸಿ ಕೂಡ ತಿನ್ನುತ್ತಾರೆ. ನೆಲ್ಲಿಕಾಯಿಯ ಉಪ್ಪಿನಕಾಯಿ, ಜ್ಯೂಸ್, ಜಾಮ್, ಮುರಬ್ಬಾ, ಚಟ್ನಿ ಕೂಡ ಬಹಳ ಫೇಮಸ್ ಆಗಿದೆ. ಅನೇಕ ಮಂದಿ ಇದನ್ನು ಬೆಳಗ್ಗೆ ಖಾಲಿ ಹೊಟ್ಟೆ ಯಲ್ಲಿ ಸೇವಿಸುತ್ತಾರೆ. ಇನ್ಕೆಲವರು ರಾತ್ರಿ ಮಲಗುವ ಮುನ್ನ ನೆಲ್ಲಿಕಾಯಿಯ ಸೇವನೆ ಮಾಡುತ್ತಾರೆ. ನೆಲ್ಲಿಕಾಯಿಯನ್ನು ರಾತ್ರಿ ಪೂರ್ತಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಇದನ್ನು ಸೇವಿಸುವುದರಿಂದ ಅನೇಕ ಸಮಸ್ಯೆಗಳು ದೂರವಾಗುತ್ತವೆ. ಇದು ಜೀರ್ಣಕ್ರಿಯೆಯನ್ನು ಸರಾಗ ಮಾಡುತ್ತದೆ ಮತ್ತು ತೂಕವನ್ನು ಕೂಡ ಕಡಿಮೆ ಮಾಡುತ್ತದೆ. ರಾತ್ರಿ ನೆನೆಸಿಟ್ಟ ನೆಲ್ಲಿಕಾಯಿಯನ್ನು ತಿನ್ನುವುದರಿಂದ ಇನ್ನೂ ಅನೇಕ ಪ್ರಯೋಜನಗಳಿವೆ.

ನೆಲ್ಲಿಕಾಯಿಯು ಹುಳಿಯ ಜೊತೆಗೆ, ಸ್ವಲ್ಪ ಕಹಿಯ ರುಚಿಯನ್ನು ಹೊಂದಿರುತ್ತದೆ. ಆದರೆ ಒಮ್ಮೆ ನೆಲ್ಲಿಕಾಯಿ ತಿಂದು ನೀರು ಕುಡಿದರೆ, ಸಿಹಿಯ ಅನುಭವಾಗುತ್ತದೆ. ನೆಲ್ಲಿಕಾಯಿಯನ್ನು ನೇರವಾಗಿ ತಿನ್ನಲು ಇಚ್ಚಿಸದವರು ಅದನ್ನು ಉಪ್ಪಿನಕಾಯಿ, ಚಟ್ನಿ, ಹಾಗು ತಂಬುಳಿಗಳನ್ನಾದರೂ ಮಾಡಿಕೊಂಡು ಸೇವಿಸಬಹುದು. ಬಹಳಷ್ಟು ಜನರು ನೆಲ್ಲಿಕಾಯಿಯನ್ನು ಒಣಗಿಸಿಕೊಂಡು ವರ್ಷಪೂರ್ತಿ ಉಪಯೋಗಿಸುತ್ತಾರೆ. ನೆಲ್ಲಿಕಾಯಿಯ ಗಿಡದ ಬೇರು, ಎಲೆ, ಕಾಯಿ ಎಲ್ಲವು ಔಷಧಿ ಗುಣಗಳನ್ನು ಹೊಂದಿವೆ. ನೆಲ್ಲಿಕಾಯಿ ಗಿಡವು ಚಳಿಗಾಲದ ಸಮಯದಲ್ಲಿ ಕಾಯಿ ಬಿಡುತ್ತದೆ. ಅಕ್ಟೊಬರ್ ನಿಂದ ಜನವರಿವರೆಗೂ ನಾವು ನೆಲ್ಲಿಕಾಯಿಯನ್ನು ಕಾಣಬಹುದು. ಆದರೆ ಈಗ ಬರುವಂತ ದೊಡ್ಡಗಾತ್ರದ ನೆಲ್ಲಿಕಾಯಿಗಳನ್ನು ನಾವು ಯಾವಾಗಲು ಮಾರುಕಟ್ಟೆಯಲ್ಲಿ ನೋಡಬಹುದು. ಇಂತಹ ತಳಿಗಳು ಹೈಬ್ರಿಡ್ ನೆಲ್ಲಿಕಾಯಿಗಳಾಗಿದ್ದು ಇದನ್ನು ಔಷಧಿಗೆ ಉಪಯೋಗಿಸುವುದಿಲ್ಲ. ಔಷಧಿಗಾಗಿ ಉಪಯೋಗಿಸುವುದು ಬೆಟ್ಟದ ನೆಲ್ಲಿಕಾಯಿ ಮಾತ್ರ.

ರೋಗನಿರೋಧಕ ಶಕ್ತಿ ವೃದ್ಧಿ
ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಮತ್ತು ಎಂಟಿಆಕ್ಸಿಡೆಂಟ್ ಅಂಶವು ಅಧಿಕ ಪ್ರಮಾಣದಲ್ಲಿ ಇರುತ್ತದೆ. ಇದು ಶರೀರದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ತಿನ್ನೋದ್ರಿಂದ ಅನೇಕ ತರಹದ ಸೋಂಕುಗಳಿಂದ ದೂರವಿರಬಹುದು.

ಮಧುಮೇಹ ನಿಯಂತ್ರಣಕ್ಕೆ ನೆಲ್ಲಿಕಾಯಿ
ಬೆಟ್ಟದ ನೆಲ್ಲಿಕಾಯಿಯನ್ನು ತೆಗೆದುಕೊಂಡು, ಸಣ್ಣ ತುಂಡುಗಳನ್ನು ಮಾಡಿ ನೀರಿಗೆ ಹಾಕಿ ಕುದಿಸಬೇಕು. ನಂತರ ಅದಕ್ಕೆ ಜೀರಿಗೆ ಪುಡಿ, ಮೆಂತ್ಯೆ ಪುಡಿ, ಸ್ವಲ್ಪ ಅರಿಸಿನ ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು. ಈ ರೀತಿಯಾಗಿ ಕಷಾಯವನ್ನು ಮಾಡಿಕೊಂಡು ಪ್ರತಿನಿತ್ಯ ಕುಡಿಯುವುದರಿಂದ ಇದು ರಕ್ತದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸಿ, ಮಧುಮೇಹವು ಹತೋಟಿಗೆ ಬರುತ್ತದೆ.

ಪುರುಷರಿಗೆ ಪ್ರಯೋಜನಕಾರಿ
ಬೆಟ್ಟದ ನಲ್ಲಿಕಾಯಿಯಲ್ಲಿ ಇರುವ ವಿಟಮಿನ್ ಸಿ ಪುರುಷರಲ್ಲಿ ಕಡಿಮೆ ಇರುವ ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಇದರ ಸೇವನೆಯು ಕೆಲಸದ ಶಕ್ತಿಯನ್ನು ಹೆಚ್ಚಿಸುತ್ತದೆ. ದೈಹಿಕ ಶಕ್ತಿಯನ್ನು ಸುಧಾರಿಸುತ್ತದೆ.

ಮೃದು ತ್ವಚೆಗೆ ಸಹಕಾರಿ
ಖಾಲಿ ಹೊಟ್ಟೆಯಲ್ಲಿ ತಿಂದರೆ ಕಾಲಜನ್ ಡಿಗ್ರ್ಯಾಡೇಡನ್ನು ಕಡಿಮೆ ಮಾಡುವ ಗುಣ ಬೆಟ್ಟದ ನೆಲ್ಲಿಕಾಯಿಯಲ್ಲಿ ಇದೆ. ಈ ಸಾರವು ಕಾಲಜನ್ ಉತ್ಪಾದನೆಗೆ ಅಗತ್ಯವಾದ ವಿಟಮಿನ್ ಎ ಯಲ್ಲಿ ಸಮೃದ್ಧವಾಗಿದೆ. ಇದು ಚರ್ಮವನ್ನು ಯೌವನವಾಗಿ ಮತ್ತು ಮೃದುವಾಗಿಡಲು ಸಹಾಯ ಮಾಡುವ ಕಾಯಿಯಾಗಿದೆ.
ದೇಶದಲ್ಲಿ ಸಿಗುವ ಬೆಟ್ಟದ ನೆಲ್ಲಿಕಾಯಿಯನ್ನು ಸಂಜೀವಿನಿಗೆ ಹೋಲಿಸಲಾಗುತ್ತದೆ. ಬೆಟ್ಟದ ನೆಲ್ಲಿಕಾಯಿ ಸೇವನೆಯಿಂದ ಸೌಂದರ್ಯ ಮತ್ತು ಆರೋಗ್ಯ ವೃದ್ಧಿ ಸೇರಿದಂತೆ ಹತ್ತಾರು ಪ್ರಯೋಜನೆಗಳಿವೆ. ಆಯುರ್ವೇದದ ಪ್ರಕಾರ, ನೆಲ್ಲಿಕಾಯಿ ನಿಯಮಿತ ಸೇವನೆಯಿಂದ ಕೂದಲು ಉದುರುವಿಕೆ, ಆಸಿಡಿಟಿ, ಜೀರ್ಣಕಾರಿ ಸಮಸ್ಯೆಗಳನ್ನು ತಡೆಯಬಹುದು. ಮಾತ್ರವಲ್ಲದೆ, ತೂಕ ಇಳಿಕೆಗೂ ಸಹಕಾರಿಯಾಗಿದ್ದು, ಥೈರಾಯ್ಡ್ ಮತ್ತು ಮಧುಮೇಹಕ್ಕೆ ನಿಯಂತ್ರಿಸುತ್ತದೆ. ದೃಷ್ಟಿ ಸುಧಾರಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಹೊಟ್ಟೆನೋವು ನಿವಾರಣೆಗೆ ನೆಲ್ಲಿಕಾಯಿ ಸಹಕಾರಿಯಾಗಿದೆ
ಹಸಿ ಬೆಟ್ಟದ ನೆಲ್ಲಿಕಾಯಿಯ ರಸವನ್ನು ತೆಗೆದುಕೊಂಡು, ಅದಕ್ಕೆ ಬೆಲ್ಲವನ್ನು ಸೇರಿಸಿ ಕುಡಿಯುವುದರಿಂದ ಹೊಟ್ಟೆ ನೋವು ನಿವಾರಣೆಯಾಗುತ್ತದೆ.

ಉಸಿರಾಟದ ತೊಂದರೆಗೆ ಬೆಟ್ಟದ ನೆಲ್ಲಿಕಾಯಿ
ಹಸಿ ಬೆಟ್ಟದ ನೆಲ್ಲಿಕಾಯಿಯನ್ನು ತೆಗೆದುಕೊಂಡು, ಅದಕ್ಕೆ ಜೇನುತುಪ್ಪ ಸೇರಿಸಿ ತಿನ್ನುವುದರಿಂದ ಉಸಿರಾಟದ ತೊಂದರೆ ನಿವಾರಣೆಯಾಗುತ್ತದೆ.

ಶೀತ ಮತ್ತು ಕಫ ನಿವಾರಣೆಗೆ ನೆಲ್ಲಿಕಾಯಿ
ಬೆಟ್ಟದ ನೆಲ್ಲಿಕಾಯಿ ರಸವನ್ನು ತೆಗೆದುಕೊಂಡು ಅದಕ್ಕೆ ಸಮಪ್ರಮಾಣದಲ್ಲಿ, ಅಂದರೆ 2 ಚಮಚ ನೆಲ್ಲಿ ರಸಕ್ಕೆ 2 ಚಮಚ ಜೇನುತುಪ್ಪ ಬೆರಸಿ ತಿನ್ನುವುದರಿಂದ ಕಫ ನಿವಾರಣೆಯಾಗಿ, ಶೀತವು ಕಡಿಮೆಯಾಗುವುದು.

ಕೂದಲಿನ ಆರೋಗ್ಯವನ್ನು ಹೆಚ್ಚಿಸುವಲ್ಲಿ ನೆಲ್ಲಿಕಾಯಿಯು ಸಹಕಾರಿಯಾಗಿದೆ
ಮಾರ್ಕೆಟನಲ್ಲಿ ಸಿಗುವ ರಾಸಾಯನಿಗಳನ್ನು ಉಪಯೋಗಿಸಿ ತಯಾರಿಸಿದ ಎಣ್ಣೆಗಳನ್ನು ಉಪಯೋಗಿಸುವ ಬದಲು, ನೈಸಗರಿಕವಾಗಿ ಸಿಗುವ ನೆಲ್ಲಿಕಾಯಿಯನ್ನು ಬಳಸಿ, ಎಣ್ಣೆಯನ್ನು ತಯಾರಿಸಬಹುದು. ಎಣ್ಣೆಯನ್ನು ಮಾಡುವ ವಿಧಾನ : ಬೆಟ್ಟದ ನೆಲ್ಲಿಕಾಯಿಯನ್ನು ಕತ್ತರಿಸಿ ಬಿಸಿಲಿನಲ್ಲಿ ಒಣಗಿಸಬೇಕು. ನಂತರ ಅದನ್ನು ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಚೆನ್ನಾಗಿ ಕುದಿಸಬೇಕು. ಆ ಎಣ್ಣೆಯ ಬಣ್ಣ ಹಸಿರಾಗಿ ಬದಲಾದ ಮೇಲೆ ತಣಿಸಿಕೊಂಡು ಪ್ರತಿನಿತ್ಯ ಕೂದಲಿಗೆ ಹಾಕುವುದರಿಂದ ಕೂದಲು ಕಪ್ಪಾಗುತ್ತದೆ. ಹಾಗೂ ಕೂದಲು ಕಾಂತಿಯುತವಾಗುತ್ತದೆ.

ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ನೆಲ್ಲಿಕಾಯಿಯ ಉಪಯೋಗ
ಕೊತ್ತಂಬರಿ ಬೀಜ ಮತ್ತು ಜೀರಿಗೆಯನ್ನು ರಾತ್ರೆ ನೆನೆಸಿಟ್ಟು, ನಂತರ ಬೆಳ್ಳಿಗ್ಗೆ ಅದನ್ನು ಸೋಸಿಕೊಂಡು ಆ ನೀರಿಗೆ ನೆಲ್ಲಿಕಾಯಿಯ ಜ್ಯೂಸ್ ಮತ್ತು ಕಲ್ಲು ಸಕ್ಕರೆ ಸೇರಿಸಿ ಕುಡಿಯುವುದರಿಂದ ದೇಹವು ತಂಪಾಗಿರುತ್ತದೆ.

ಉದರ ಸಮಸ್ಯೆಗಳು ದೂರ
ನೆಲ್ಲಿಕಾಯಿ ಸೇವನೆ ಜೀರ್ಣಕ್ರಿಯೆಗೆ ಬಹಳ ಒಳ್ಳೆಯದು. ಇದರಲ್ಲಿರುವ ಫೈಬರ್ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಬೆಳಿಗ್ಗೆ ಎದ್ದೊಡನೆ ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ ನೆಲ್ಲಿಕಾಯಿಯನ್ನು ತಿನ್ನುವುದರಿಂದ ಗ್ಯಾಸ್, ಮಲಬದ್ಧತೆ, ಅಜೀರ್ಣ, ವಾಕರಿಕೆ ಮುಂತಾದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು.

ದೇಹದಲ್ಲಿರುವ ವಿಷದ ಅಂಶವನ್ನು ಹೊರಹಾಕುತ್ತೆ
ಪ್ರತಿನಿತ್ಯ ನಾವು ಸೇವಿಸುವ ಆಹಾರದಲ್ಲಿ ನಮಗೇ ತಿಳಿಯದಂತೆ ಅನೇಕ ವಿಷಯುಕ್ತ ಪದಾರ್ಥಗಳು ಅಡಗಿರುತ್ತವೆ. ಅವು ಶರೀರದ ಒಳಗಡೆ ಪ್ರವೇಶಿಸಿ ತಮ್ಮ ಕೆಲಸವನ್ನು ಆರಂಭಿಸುತ್ತವೆ. ಬೆಳಿಗ್ಗೆ ನೆಲ್ಲಿಕಾಯಿಯನ್ನು ತಿಂದರೆ ಅದು ನಮ್ಮ ದೇಹದಲ್ಲಿನ ವಿಷಕಾರಿ ಅಂಶವನ್ನು ಹೊರಹಾಕುತ್ತದೆ. ದೇಹದಿಂದ ವಿಷಕಾರಿ ಅಂಶ ಹೊರನಡೆದಾಗ ಲಿವರ್ ಚೆನ್ನಾಗಿ ಕೆಲಸ ಮಾಡುತ್ತದೆ. ಅದರಿಂದ ಲಿವರ್ ಗೆ ಸಂಬಂಧಿಸಿದ ಸಮಸ್ಯೆಗಳೂ ಉದ್ಭವಿಸುವುದಿಲ್ಲ.

ಹೃದಯವನ್ನು ಆರೋಗ್ಯವಾಗಿರಿಸುತ್ತೆ
ರಾತ್ರಿ ನೆನೆಸಿಟ್ಟ ನೆಲ್ಲಿಕಾಯಿಯನ್ನು ಬೆಳಿಗ್ಗೆ ತಿನ್ನುವುದರಿಂದ ಹೃದಯ ಸಂಬಂಧಿ ತೊಂದರೆಗಳು ಕಡಿಮೆಯಾಗುತ್ತದೆ. ನೆಲ್ಲಿಕಾಯಿಯಿಂದ ರಕ್ತದೊತ್ತಡ ಕೂಡ ನಿಯಂತ್ರಣದಲ್ಲಿರುತ್ತದೆ. ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ ಹೃದಯ ಆರೋಗ್ಯವನ್ನು ಕಾಪಾಡುತ್ತದೆ. ನೆಲ್ಲಿಕಾಯಿ ಎಷ್ಟೇ ಒಳ್ಳೆಯದಾಗಿದ್ದರೂ ಕೂಡ ಕೆಲವು ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಇದರಿಂದ ತೊಂದರೆಯಾಗಬಹುದು. ಹಾಗಾಗಿ ಪ್ರತಿನಿತ್ಯ ಸೇವಿಸುವ ಮೊದಲು ಒಮ್ಮೆ ವೈದ್ಯರ ಸಲಹೆ ಪಡೆದುಕೊಳ್ಳಿ. ಸಾಮಾನ್ಯವಾಗಿ ಈ ಕೆಳಗಿನ ತೊಂದರೆ ಇರುವವರಿಗೆ ನೆಲ್ಲಿಕಾಯಿ ವರ್ಜ್ಯ.

ಮಧುಮೇಹ ಸಮಸ್ಯೆ ದೂರಾಗುತ್ತದೆ
ನಿಮ್ಮ ದೇಹದ ರಕ್ತ ಸಂಚಾರದಲ್ಲಿ ಸಕ್ಕರೆ ಅಂಶದ ಪ್ರಮಾಣ ಹೆಚ್ಚಾದರೆ ಅದರಿಂದ ನಿಮ್ಮ ಮಧುಮೇಹದ ಮಟ್ಟ ನಿಯಂತ್ರಣ ತಪ್ಪಿ ಏರಿಕೆಯಾಗುತ್ತದೆ. ಇದರ ಜೊತೆಗೆ ಇನ್ನು ಕೆಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತವೆ. ಕೆಲವರಿಗೆ ಉಸಿರಾಟದ ತೊಂದರೆ ಮತ್ತು ಆಸ್ತಮಾ ಸಮಸ್ಯೆ ಕೂಡ ಕಂಡು ಬರಬಹುದು. ಆದರೆ ಎಲ್ಲಾ ಆರೋಗ್ಯ ಸಮಸ್ಯೆಗಳಿಗೂ ದಿವ್ಯೌಷಧಿಯ ರೀತಿಯಲ್ಲಿ ಕೆಲಸ ಮಾಡುವ ಬೆಟ್ಟದ ನೆಲ್ಲಿಕಾಯಿಯಲ್ಲಿ ಇಂತಹ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಉತ್ತಮ ಪರಿಹಾರವಿದೆ.

ಜೀರ್ಣಶಕ್ತಿ ಹೆಚ್ಚಾಗುತ್ತದೆ
ಇತ್ತೀಚಿನ ಬಹುತೇಕ ಯುವ ಜನತೆ ಸೇರಿದಂತೆ ವಯಸ್ಸಾದವರು ಸಹ ತಾವು ಸೇವಿಸಿದ ಆಹಾರ ಹೊಟ್ಟೆಯಲ್ಲಿ ಸರಿಯಾಗಿ ಜೀರ್ಣವಾಗುತ್ತಿಲ್ಲ ಎಂಬ ದೂರನ್ನು ಹೇಳುತ್ತಾರೆ. ಹೊಟ್ಟೆಯಲ್ಲಿ ಆಮ್ಲೀಯತೆ ಸಮಸ್ಯೆ ಕೆಲವರಿಗೆ ಹೆಚ್ಚಾದರೆ ಇನ್ನು ಕೆಲವರಿಗೆ ಮಲಬದ್ಧತೆ ಸಮಸ್ಯೆ ಕಾಡುತ್ತದೆ.
ಇದಕ್ಕೆಲ್ಲಾ ದುರ್ಬಲ ಜೀರ್ಣ ವ್ಯವಸ್ಥೆ ಕಾರಣ ಎಂದು ಹೇಳಬಹುದು. ಆದರೆ ಬೆಟ್ಟದ ನೆಲ್ಲಿಕಾಯಿಯ ನಿಯಮಿತವಾದ ಸೇವನೆಯಿಂದ ಇಂತಹ ಸಮಸ್ಯೆಗಳನ್ನು ಸುಲಭವಾಗಿ ಪಾರು ಮಾಡಿಕೊಳ್ಳಬಹುದು.
ದೇಹದಿಂದ ವಿಷಕಾರಿ ಅಂಶಗಳನ್ನು ತೆಗೆದು ಹಾಕುವ ಸಂದರ್ಭದಲ್ಲಿ ಆರೋಗ್ಯಕರ ಜೀರ್ಣ ವ್ಯವಸ್ಥೆಯನ್ನು ನಿಮ್ಮದಾಗಿಸುವಂತೆ ನೋಡಿಕೊಳ್ಳುವ ಸ್ವಭಾವ ಬೆಟ್ಟದ ನೆಲ್ಲಿಕಾಯಿಯಲ್ಲಿ ಕಂಡು ಬರುತ್ತದೆ.

ಲಿವರ್ ಅಥವಾ ಯಕೃತ್ ಆರೋಗ್ಯ ರಕ್ಷಣೆ
ಬೆಟ್ಟದ ನೆಲ್ಲಿಕಾಯಿ ನಿಮ್ಮ ಲಿವರ್ ಕಾರ್ಯ ಚಟುವಟಿಕೆಯನ್ನು ಅಭಿವೃದ್ಧಿ ಪಡಿಸಿ ನಿಮ್ಮ ದೇಹದಿಂದ ವಿಷಕಾರಿ ತ್ಯಾಜ್ಯಗಳನ್ನು ಸುಲಭವಾಗಿ ಹೊರ ಹಾಕಿ ನಿಮ್ಮನ್ನು ರೋಗ – ರುಜಿನಗಳಿಂದ ಮುಕ್ತಿಗೊಳಿಸುತ್ತದೆ.
ನಿಮ್ಮ ದೇಹದಿಂದ ವಿಷಕಾರಿ ಅಂಶಗಳು ಬೆವರಿನ ರೂಪದಲ್ಲಿ ಅಥವಾ ಮೂತ್ರ ವಿಸರ್ಜನೆಯ ರೂಪದಲ್ಲಿ ನಿಮ್ಮಿಂದ ದೂರವಾಗಬಹುದು. ಇದರಿಂದ ನಿಮ್ಮ ಆರೋಗ್ಯವನ್ನು ನೀವು ಅಚ್ಚುಕಟ್ಟಾಗಿ ಕಾಪಾಡಿಕೊಳ್ಳಲು ನೆರವಾಗುತ್ತದೆ.

ಪೌಷ್ಟಿಕಾಂಶಗಳು ನಿಮ್ಮ ದೇಹ ಸೇರುತ್ತವೆ
ವಿಟಮಿನ್ ‘ ಸಿ ‘ ಅಂಶದ ಮೂಲಕ ಬೆಟ್ಟದ ನೆಲ್ಲಿಕಾಯಿಯಲ್ಲಿ ಕಂಡು ಬರುವ ಕಬ್ಬಿಣದ ಅಂಶ, ಕ್ಯಾಲ್ಸಿಯಂ, ಪಾಸ್ಪರಸ್ ಖನಿಜಾಂಶಗಳು ನಿಮ್ಮ ದೇಹ ಸೇರುವುದರಿಂದ ಪೌಷ್ಟಿಕಾಂಶ ಭರಿತವಾದ ಪಾನೀಯ ಎಂದು ಬೆಟ್ಟದ ನೆಲ್ಲಿಕಾಯಿಯ ಜ್ಯೂಸನ್ನು ಕರೆಯಬಹುದು.

ಬೆಟ್ಟದ ನೆಲ್ಲಿಕಾಯಿಯ ಜ್ಯೂಸ್ ಸೇವನೆ ಮಾಡುವುದು ಹೇಗೆ?
ಬೆಳಗಿನ ಖಾಲಿ ಹೊಟ್ಟೆಯಲ್ಲಿ ಬೆಟ್ಟದ ನೆಲ್ಲಿಕಾಯಿಯ ಜ್ಯೂಸ್ ಕುಡಿಯುವ ಅಭ್ಯಾಸ ನಿಮ್ಮದಾಗಬೇಕು. ಒಂದು ಲೋಟ ನೀರಿಗೆ ಸುಮಾರು 20 ರಿಂದ 30 ಎಂಎಲ್ ನೆಲ್ಲಿಕಾಯಿ ರಸವನ್ನು ಮಿಶ್ರಣ ಮಾಡಿ ಡೈಲ್ಯೂಟ್ ಮಾಡಿ ಸೇವನೆ ಮಾಡಿ.

ನಿಮಗೆ ಬೇಕೆಂದರೆ ಸ್ವಲ್ಪ ನಿಂಬೆ ಹಣ್ಣಿನ ರಸ ಮತ್ತು ಜೇನು ತುಪ್ಪವನ್ನು ಬೆರೆಸಿ ಸೇವನೆ ಮಾಡಬಹುದು. ಆಯುರ್ವೇದ ತಜ್ಞರು ಹೇಳುವ ಹಾಗೆ ಬ್ಲಾಕ್ಬೆರ್ರಿ ಮತ್ತು ಹಾಗಲಕಾಯಿ ಜ್ಯೂಸ್ ಮಿಶ್ರಣ ಮಾಡಿ ಸಹ ಸೇವನೆ ಮಾಡಿದರೆ ಮಧುಮೇಹ ಸಮಸ್ಯೆ ಅಚ್ಚುಕಟ್ಟಾಗಿ ನಿರ್ವಹಣೆಯಾಗುತ್ತದೆ.

ಇನ್ನು ಈಗಾಗಲೇ ತಲೆ ಕೂದಲು ಉದುರುವಿಕೆ ಸಮಸ್ಯೆ ಮತ್ತು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶಗಳನ್ನು ಒಳಗೊಂಡಿರುವವರು ನೆಲ್ಲಿಕಾಯಿಯ ಜ್ಯೂಸ್ ಜೊತೆಗೆ ಅಲೋವೆರಾ ಜ್ಯೂಸ್ ಬಳಕೆ ಮಾಡಿದರೆ ಉತ್ತಮ.

ಕಣ್ಣಿನ ಸಮಸ್ಯೆಯನ್ನು ಹೊಂದಿದವರಿಗೆ ನೆಲ್ಲಿಕಾಯಿ ಜೂಸ್ ಸಾಕಷ್ಟು ಸಹಾಯ ಮಾಡುತ್ತದೆ ರಾತ್ರಿ ಮಲಗುವ ಸಮಯದಲ್ಲಿ ಒಂದು ಲೋಟ ನೀರಿಗೆ ಸ್ವಲ್ಪ ನೆಲ್ಲಿಕಾಯಿ ರಸವನ್ನು ಮಿಶ್ರಣ ಮಾಡಿ ಕುಡಿಯುವ ಅಭ್ಯಾಸವನ್ನು ಮಾಡಿಕೊಂಡರೆ ನಿಮ್ಮ ದೀರ್ಘ ಕಾಲದ ನಿದ್ರಾಹೀನತೆ ಸಮಸ್ಯೆ ದೂರವಾಗುತ್ತದೆ. ಜೊತೆಗೆ ನಿಮ್ಮ ದೇಹದಿಂದ ವಿಷಕಾರಿ ತ್ಯಾಜ್ಯಗಳು ಬೆಳಗಿನ ಮಲ ವಿಸರ್ಜನೆಯ ಸಂದರ್ಭದಲ್ಲಿ ಹೊರ ಹೋಗುತ್ತವೆ.

ಚಳಿಗಾಲದ ಅನಾರೋಗ್ಯಕ್ಕೆ ಅಗತ್ಯವಾದ ಆಹಾರ ಪದಾರ್ಥ
ಬೆಟ್ಟದ ನೆಲ್ಲಿಕಾಯಿಯ ಜ್ಯೂಸ್ ಸೇವನೆ ಮಾಡಲು ಸ್ವಲ್ಪ ಕಹಿ ಅನುಭವ ಉಂಟು ಮಾಡುತ್ತದೆ. ಸೇವನೆ ಮಾಡಿದ ಮೇಲೆ ಬಾಯಿ ಮತ್ತು ನಾಲಿಗೆ ಸಿಹಿಯಾಗುತ್ತದೆ.

ಆರೋಗ್ಯ ತಜ್ಞರ ಪ್ರಕಾರ ಚಳಿಗಾಲದ ಸಮಯದಲ್ಲಿ ನಿಮ್ಮ ಶೀತ, ಕೆಮ್ಮು, ಜ್ವರ, ನೆಗಡಿ, ಬಾಯಿ ಹುಣ್ಣು ಇತ್ಯಾದಿಗಳ ಸಮಸ್ಯೆಗೆ ಅತ್ಯಂತ ಸುಲಭವಾಗಿ ಮನೆ ಮದ್ದಿನ ಮೂಲಕ ಪರಿಹಾರ ಮಾಡಿಕೊಳ್ಳಬೇಕು ಎಂದರೆ 2 ಟೀ ಚಮಚ ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ನೊಂದಿಗೆ ಅಷ್ಟೇ ಪ್ರಮಾಣದ ಹಸಿ ಜೇನು ತುಪ್ಪವನ್ನು ಸೇರಿಸಿ ಪ್ರತಿ ದಿನವೂ ಸೇವನೆ ಮಾಡಿ.

ಶೀತ ಮತ್ತು ಕೆಮ್ಮಿನ ಸಮಸ್ಯೆಗಳು ಬಹಳ ಬೇಗ ನಿಮ್ಮಿಂದ ದೂರವಾಗುತ್ತವೆ. ಸ್ವಲ್ಪ ಉಗುರು ಬೆಚ್ಚಗಿನ ನೀರಿನಲ್ಲಿ ಎರಡು ಟೀ ಚಮಚದಷ್ಟು ಬೆಟ್ಟದ ನೆಲ್ಲಿಕಾಯಿ ರಸವನ್ನು ಮಿಶ್ರಣ ಮಾಡಿ ದಿನದಲ್ಲಿ ಎರಡು ಬಾರಿ ಬಾಯಿ ಮುಕ್ಕಳಿಸುವುದರಿಂದ ಬಾಯಿಯ ಹುಣ್ಣುಗಳು ಬಹಳ ಬೇಗನೆ ವಾಸಿಯಾಗುತ್ತವೆ.


Share News

Leave a Reply

Your email address will not be published. Required fields are marked *