Breaking News

ಮಂಗಳೂರು: ‘ಯಕ್ಷರಂಗದ ರಾಜ’ ಖ್ಯಾತಿಯ ಪೆರುವಾಯಿ ನಾರಾಯಣ ಶೆಟ್ಟಿ ನಿಧನ

Share News

ಮಂಗಳೂರು, ಜ 24: “ಯಕ್ಷರಂಗದ ರಾಜ” ಎಂದೇ ಖ್ಯಾತರಾದ, ಹೆಸರಾಂತ ಯಕ್ಷಗಾನ ಕಲಾವಿದ ಪೆರುವಾಯಿ ನಾರಾಯಣ ಶೆಟ್ಟಿ(82) ಅವರು ಮಂಗಳವಾರ ರಾತ್ರಿ ನಿಧನರಾಗಿದ್ದಾರೆ.

ತೆಂಕುತಿಟ್ಟಿನ ಯಕ್ಷರಂಗದಲ್ಲಿ ತನ್ನದೇ ಛಾಪನ್ನು ನಿರ್ಮಿಸಿದ ಕನ್ನಡ -ತುಳು ಭಾಷೆಯ ಪ್ರಸಂಗಗಳಲ್ಲಿ ಏಕಪ್ರಕಾರ ಮಿಂಚಿದ ಪೆರುವಾಯಿ ನಾರಾಯಣ ಶೆಟ್ಟರು, ಕಂಚಿನ ಧ್ವನಿ, ಶ್ರುತಿಬದ್ಧ ಮಾತು ಹಾಗೂ ಅರ್ಥಪೂರ್ಣ ಸಂಭಾಷಣೆಗೆ ಹೆಸರಾಗಿದ್ದರು.

ಇದನ್ನೂ ಓದಿ: ಹನುಮ ವೇಷಧಾರಿ ವೇದಿಕೆಯಲ್ಲೇ ಕುಸಿದು ಬಿದ್ದು ಸಾವು

ಬಂಟ್ವಾಳ ತಾಲೂಕು ಪೆರುವಾಯಿ ಇವರ ಹುಟ್ಟೂರು. ಮದನಪ್ಪ ಶೆಟ್ಟಿ ಮತ್ತು ಅಬ್ಬಕ್ಕ ದಂಪತಿಗಳ ಸುಪುತ್ರರಾಗಿದ್ದ ಇವರು, 12ನೇ ವಯಸ್ಸಿನಲ್ಲೇ ಯಕ್ಷಗಾನದಲ್ಲಿ ತೊಡಗಿಸಿಕೊಂಡಿದ್ದರು. ಮಡಾವು, ಧರ್ಮಸ್ಥಳ, ಕರ್ನಾಟಕ, ಪೊಳಲಿ ರಾಜರಾಜೇಶ್ವರಿ ಮೇಳ, ಕದ್ರಿ, ಕುಂಬಳೆ, ಕುಂಟಾರು, ಕಟೀಲು ಹೀಗೆ ವಿವಿಧ ಯಕ್ಷಗಾನ ಮಂಡಳಿಗಳಲ್ಲಿ ತಿರುಗಾಟ ಮಾಡಿದ ಪೆರುವಾಯಿ ನಾರಾಯಣ ಶೆಟ್ಟಿ ಅವರದು ಬಹುದೊಡ್ಡ ಸಾಧನೆ. ಅವರು ಸುಮಾರು 52 ವರ್ಷ ಗಳ ಕಾಲ ನಿರಂತರ ತಿರುಗಾಟ ನಡೆಸಿದ್ದರು. ಬಳಿಕ ಅನಾರೋಗ್ಯದಿಂದಾಗಿ ಯಕ್ಷರಂಗದಿಂದ ನಿವೃತ್ತಪಡೆದಿದ್ದರು.

ಕಟೀಲುಮೇಳದ ಕಲಾವಿದರಾಗಿದ್ದ ಅವರು ನಿರ್ವಹಿಸುತ್ತಿದ್ದಾಗ ರಕ್ತಬೀಜ, ಹಿರಣ್ಯಕಷ್ಯಪು, ಕಂಸ, ಸುಂದರರಾವಣ, ಋತುಪರ್ಣ, ಹನೂಮಂತ, ಜಾಬಾಲಿ, ಅರುಣಾಸುರ, ಹಿರಣ್ಯಾಕ್ಷ, ಶಿಶುಪಾಲ ಮುಂತಾದ ಹಲವು ಪಾತ್ರಗಳನ್ನು ಬಹಳ ಪರಿಣಾಮಕಾರಿಯಾಗಿ ರಂಗದಲ್ಲಿ ಬಿಂಬಿಸಿ ಖ್ಯಾತರಾದವರು. ಕೋಟಿ ಚೆನ್ನಯದ ಕೋಟಿ ಮೊದಲಾದ ವೇಷಗಳ ನಿರ್ವಹಣೆಯಲ್ಲಿ “ಪೆರುವಾಯಿ ಶೈಲಿ’ ಎಂಬ ಹೊಸ ಹಾದಿಯನ್ನು ನಿರ್ಮಿಸಿದ ಕೀರ್ತಿವಂತ.

ಇದನ್ನೂ ಓದಿ: ಬಂಟ್ವಾಳ: ವಗ್ಗ ಸಮೀಪದ ಮೇನಾಡುವಿನಲ್ಲಿ ತಾಯಿ ಮಗಳಿಗೆ ಚೂರಿ ತೋರಿಸಿ ದರೋಡೆಗೈದ 7 ಮಂದಿ ಆರೋಪಿಗಳ ಬಂಧನ

ತುಳು ಪ್ರಸಂಗಗಳ ಪಾತ್ರನಿರ್ವಹಣೆಯಲ್ಲೂ ವೈಶಿಷ್ಟ್ಯತೆಯನ್ನು ಮೆರೆದವರು. ಇವರ ಕೋಟಿ, ದೇವುಪೂಂಜ ಮುಂತಾದ ಪಾತ್ರಗಳು ಬಹಳ ಪ್ರಸಿದ್ಧ ಪಡೆದಿತ್ತು. 2016ನೇ ಸಾಲಿನ ಚೊಚ್ಚಲ “ಯಕ್ಷಧ್ರುವ ಪಟ್ಲ ಪ್ರಶಸ್ತಿ” ಸೇರಿದಂತೆ ಹಲವು ಸನ್ಮಾನ ಇವರಿಗೆ ಸಂದಿದೆ.

 


Share News

Leave a Reply

Your email address will not be published. Required fields are marked *