Breaking News

ಸರ್ಕಾರಿ, ಅನುದಾನಿತ ಪ್ರಾಥಮಿಕ ಶಾಲೆಗಳಿಗೆ 13,352 ಶಿಕ್ಷಕರ ನೇಮಕಾತಿಗೆ ಹೈಕೋರ್ಟ್ ಅನುಮತಿ

Share News

ಬೆಂಗಳೂರು: ರಾಜ್ಯದಲ್ಲಿ 13,352 ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಮುಂದುವರಿಸಲು ಸರ್ಕಾರಕ್ಕೆ  ಹೈಕೋರ್ಟ್ ಅನುಮತಿ ನೀಡಿದೆ.

ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳ ನೇಮಕಾತಿ ಸಂಬಂಧ 2022ರ ನವೆಂಬರ್ 18ರಂದು ಪ್ರಕಟಿಸಿದ್ದ 1:1ರ ಅನುಪಾತದ ತಾತ್ಕಾಲಿಕ ಆಯ್ಕೆಪಟ್ಟಿ ರದ್ದುಪಡಿಸಿ ಹೈಕೋರ್ಟ್‌ ಏಕಸದಸ್ಯ ನ್ಯಾಯಪೀಠದ ಆದೇಶ ರದ್ದುಪಡಿಸಿರುವ ಕ್ರಮವನ್ನು ಪ್ರಶ್ನಿಸಿ ಜಿ.ವಿ.ನರೇಂದ್ರ ಬಾಬು ಸೇರಿದಂತೆ ಕೆಲ ಅಭ್ಯರ್ಥಿಗಳು ಸಲ್ಲಿಸಿದ್ದ ಪ್ರತ್ಯೇಕ ಮೇಲ್ಮನವಿ ಅರ್ಜಿಗಳನ್ನು ಸಲ್ಲಿಸಿದ್ದರು.

ಈ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ.ಜಿ.ಎಸ್‌.ಕಮಲ್‌ ಅವರಿದ್ದ ವಿಭಾಗೀಯ ಪೀಠ, ಸರ್ಕಾರವು 2023ರ ಜೂ.8ರಂದು ಸಿದ್ಧಪಡಿಸಿರುವ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಹೆಸರಿದ್ದ 13,352 ಮಂದಿ ಆಯ್ಕೆ ಅಭ್ಯರ್ಥಿಗಳಿಂದ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಮುಂದುವರಿಸಲು ಅನುಮತಿಸಿತು.

ಅಲ್ಲದೆ, ರಾಜ್ಯಾದ್ಯಂತ ದೊಡ್ಡ ಪ್ರಮಾಣದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳು ಭರ್ತಿಯಾಗದೆ ಖಾಲಿ ಉಳಿದಿವೆ. ಇದರಿಂದ ಶಿಕ್ಷಕರ ಕೊರತೆ ಉಂಟಾಗಿ 6 ರಿಂದ 8 ತರಗತಿಗಳ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ. ಹುದ್ದೆಗಳ ಭರ್ತಿಗೆ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಅಗತ್ಯತೆ ಕಂಡುಬಂದಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರಿಗಣಿಸಿ 2023ರ ಜೂ.8ರಂದು ಸಿದ್ಧಪಡಿಸಿರುವ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಾರ 13,352 ಮಂದಿ ಆಯ್ಕೆಯಾದ ಅಭ್ಯರ್ಥಿಗಳಿಂದ ಶಿಕ್ಷಕರನ್ನು ನೇಮಕಾತಿಯನ್ನು ರಾಜ್ಯ ಸರ್ಕಾರ ಮಾಡಬಹುದು ಎಂದು ಆದೇಶದಲ್ಲಿ ತಿಳಿಸಿತು.

ಪತಿ ಮತ್ತು ಪೋಷಕರ ಆದಾಯ ಪ್ರಮಾಣ ಪತ್ರವನ್ನು ಮತ್ತು ಮೆರಿಟ್‌/ರೋಸ್ಟರ್ ಅನ್ನು ಪರಿಗಣಿಸಿ ತಾತ್ಕಾಲಿಕ ಆಯ್ಕೆಪಟ್ಟಿ ಸಿದ್ಧಪಡಿಸಿ 2023ರ ಜೂ.6ರಂದು ಪ್ರಕಟಿಸಲಾಗಿದೆ ಎಂದು ಸರ್ಕಾರ ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದೆ. ಅದರಂತೆ ನೇಮಕಾತಿಗೆ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯಂತೆ ಆದಾಯ ಪ್ರಮಾಣಪತ್ರ ಸಲ್ಲಿಸಿದವರ ಆಯ್ಕೆ ಅಂತಿಮಗೊಳಿಸಬಹುದಾಗಿದೆ.

ಆದರೆ, ಸರ್ಕಾರದ ಅಧಿಸೂಚನೆಯಲ್ಲಿ ಹೇಳಿದಂತೆ ನಿಗದಿತ ನಮೂನೆಯಲ್ಲಿ ಆದಾಯ ಪ್ರಮಾಣ ಪತ್ರ ಸಲ್ಲಿಸದ ಅಭ್ಯರ್ಥಿಗಳ ಆಯ್ಕೆ ಮುಂದೂಡಲಾಗಿದೆ. ನೊಂದ ಅಭ್ಯರ್ಥಿಗಳು ಕರ್ನಾಟಕ ಆಡಳಿತಾತ್ಮಕ ನ್ಯಾಯಾಧೀಕರಣಕ್ಕೆ (ಕೆಎಟಿ) ಅರ್ಜಿ ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದು. ಆ ಅರ್ಜಿ ದಾವೆ ಇತ್ಯರ್ಥ ಆಗುವವರೆಗೆ ವಿವಾದಿತ ಅಭ್ಯರ್ಥಿಗಳ ಆಯ್ಕೆ ಮುಂದೂಡಲಾಗಿದೆ ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.

ಅಷ್ಟೇ ಅಲ್ಲದೆ, 2023ರ ಜೂನ್​ 8ರಂದು ಪ್ರಕಟಿಸಿದ ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ 451 ಅಭ್ಯರ್ಥಿಗಳನ್ನು ಹೊರಗಿಡಲಾಗಿದೆ. ಅದು ಕೇವಲ ಅರ್ಹತೆಯ ಆಧಾರದ ಮೇಲೆ 451 ಅಭ್ಯರ್ಥಿಗಳ ಹೆಸರನ್ನು ಹೊರಗಿಡಲಾಗಿದೆ ಎಂದು ಹೇಳಲಾಗಿದೆ. ಅದರಂತೆ ನಿಗದಿತ ನಮೂನೆಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಒದಗಿಸದ ಅಭ್ಯರ್ಥಿಗಳ ಅರ್ಹತೆ ಅಮಾನ್ಯವಾಗಲಿದೆ.

ಅಂತಹ ಹುದ್ದೆಗಳನ್ನು ಅರ್ಹತೆಯ ಮೇಲೆ ಹೊರಗಿಡಲಾದ ಅಭ್ಯರ್ಥಿಗಳು ಮತ್ತು ನಿಗದಿತ ನಮೂನೆಯಲ್ಲಿ ಜಾತಿ-ಆದಾಯ ಪ್ರಮಾಣಪತ್ರಗಳನ್ನು ಸಲ್ಲಿಸಿದ ಅಭ್ಯರ್ಥಿಗಳಿಂದ ಭರ್ತಿ ಮಾಡಬಹುದು. ಪ್ರಸ್ತುತ ವ್ಯಾಜ್ಯದಿಂದ ರಾಜ್ಯದಾದ್ಯಂತ 6 ರಿಂದ 8 ನೇ ತರಗತಿಯ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡಿದೆ. ಇಂತಹ ವಿಚಿತ್ರವಾದ ಪರಿಸ್ಥಿತಿಯನ್ನು ಪರಿಗಣಿಸಿ ಈ ನಿಬಂಧನೆಯೊಂದಿಗೆ ನೇಮಕ ಪ್ರಕ್ರಿಯೆ ಮುಂದುವರಿಸಲು ರಾಜ್ಯ ಸರ್ಕಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.


Share News

Leave a Reply

Your email address will not be published. Required fields are marked *