Breaking News

ಎಚ್.ಡಿ.ಕುಮಾರಸ್ವಾಮಿಗೆ ಪಕ್ಷವನ್ನು ಸ್ವತಂತ್ರವಾಗಿ ಮುನ್ನಡೆಸಲಾಗುತ್ತಿಲ್ಲ: ಚಲುವರಾಯಸ್ವಾಮಿ

Share News

ಮಂಡ್ಯ(ಅ.08):  ಜೆಡಿಎಸ್ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುವುದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅಸಾಧ್ಯವಾಗಿರುವುದರಿಂದಲೇ ಅವರು ಅನಿವಾರ್ಯವಾಗಿ ಬಿಜೆಪಿ ಜೊತೆಗೆ ಮೈತ್ರಿಗೆ ಮೊರೆ ಹೋಗಿದ್ದಾರೆ ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

1977ರ ನಂತರದ ದಿನಗಳಲ್ಲಿ ಜನತಾ ಪಕ್ಷ ಒಡೆದು ಹೋಳಾಗಿದೆ. ಆದರೆ ಎಂದೂ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡ ಉದಾಹರಣೆಗಳಿಲ್ಲ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪಕ್ಷವನ್ನು ಕಷ್ಟಪಟ್ಟು ಉಳಿಸಿಕೊಂಡು ಬಂದಿದ್ದರು. ಆದರೆ, ಅವರ ಪುತ್ರ ಎಚ್.ಡಿ.ಕುಮಾರಸ್ವಾಮಿಗೆ ಪಕ್ಷವನ್ನು ಸ್ವತಂತ್ರವಾಗಿ ಮುನ್ನಡೆಸಲಾಗುತ್ತಿಲ್ಲ. ಆದ ಕಾರಣ ಯಾರಿಗೂ ಒಪ್ಪಿಗೆಯಾಗದಿದ್ದರೂ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು.

ಇದನ್ನೂ ಓದಿ: Bangalore : ಪಟಾಕಿ ಅಂಗಡಿಗೆ ಬೆಂಕಿ – 13 ಕಾರ್ಮಿಕರು ಸಜೀವ ದಹನ

ಈ ಮೈತ್ರಿ ಸ್ವತಃ ದೇವೇಗೌಡರಿಗೆ ಇಷ್ಟವಿಲ್ಲವೆಂಬ ಮಾತುಗಳೂ ಇವೆ. ಈ ಬಗ್ಗೆ ಪಕ್ಷದೊಳಗೆ ಅಪಸ್ವರಗಳು ಕೇಳಿಬಂದಾಗ ಪತ್ರಿಕಾಗೋಷ್ಠಿ ನಡೆಸಿ ಅವರ ಪಕ್ಷದಲ್ಲೇ ಕುಳಿತು ಬಲವಂತವಾಗಿ ಹೇಳಿಸಿದಂತಿದೆ. ಈ ಬಗ್ಗೆ ಅವರ ಪಕ್ಷದಲ್ಲೇ ಹಾಲಿ ಶಾಸಕರು, ಮಾಜಿ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರಲ್ಲೂ ಅಸಮಾಧಾನವಿದೆ. ನಾಯಕತ್ವದ ಕೊರತೆಯಿಂದ ಹೀನಾಯ ಸ್ಥಿತಿ ತಲುಪಿರುವ ಬಿಜೆಪಿಗೂ ಜೆಡಿಎಸ್ ಸಖ್ಯ ಅನಿವಾರ್ಯವಾಗಿದೆ. ಈ ಎರಡೂ ಪಕ್ಷಗಳ ಮೈತ್ರಿಯಿಂದ ಕಾಂಗ್ರೆಸ್ ಪಕ್ಷಕ್ಕೇನೂ ನಷ್ಟವಿಲ್ಲ ಎಂದು ಸ್ಪಷ್ಟಪಡಿಸಿದರು.

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ೮೦ ಸ್ಥಾನಗಳನ್ನೂ ಪಡೆಯುವುದಿಲ್ಲ ಎಂದು ಹೇಳುತ್ತಿದ್ದರು. ಆದರೆ ಜನ ನಮಗೆ ಪೂರ್ಣ ಪ್ರಮಾಣದಲ್ಲಿ ಆಶೀರ್ವಾದ ಮಾಡಿದ್ದಾರೆ. ೧೩೬ ಸ್ಥಾನಗಳನ್ನು ಗೆಲ್ಲಿಸಿದ್ದಾರೆ. ಇದು ಸಾಧನೆಯಲ್ಲವೇ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಬಂಟ್ವಾಳ : ಚಾಲಕನ ನಿಯಂತ್ರಣ ತಪ್ಪಿ ಅಕ್ಕಿ ಸಾಗಾಟದ ಲಾರಿ ಪಲ್ಟಿ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ೨೮ ಸ್ಥಾನಗಳ ಪೈಕಿ ಕಾಂಗ್ರೆಸ್ ೨೫ ಸ್ಥಾನಗಳಲ್ಲಿ ಗೆಲುವು ಸಾಧಿಸಿದರೂ ಅಚ್ಚರಿಯಿಲ್ಲ. ಜನ ನಮ್ಮನ್ನು ಕೈಹಿಡಿಯುತ್ತಾರೆಂಬ ವಿಶ್ವಾಸ ನಮಗಿದೆ. ವಿಧಾನಸಭಾ ಚುನಾವಣಾ ಫಲಿತಾಂಶದ ಮಾದರಿಯಲ್ಲೇ ಲೋಕಸಭಾ ಚುನಾವಣಾ ಫಲಿತಾಂಶ ಬರಲಿದೆ ಎಂದು ವಿಶ್ವಾಸದಿಂದ ಹೇಳಿದರು.

8 ಸಾವಿರ ಕೋಟಿ ರು.ಗೆ ಹುಡುಕಾಟ: ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಿಲ್ಲೆಗೆ ಮಂಜೂರು ಮಾಡಿದ್ದಾರೆನ್ನಲಾದ ೮ ಸಾವಿರ ಕೋಟಿ ರು.ಅನುದಾನಕ್ಕೆ ಹುಡುಕಾಟ ನಡೆಸಿದ್ದೇನೆ. ಇದುವರೆಗೂ ಎಲ್ಲಿಯೂ ಸಿಕ್ಕಿಲ್ಲ. ಈ ವಿಚಾರವಾಗಿ ಎಲ್ಲ ಅಧಿಕಾರಿಗಳ ಸಭೆಯನ್ನೂ ಕರೆದು ಚರ್ಚೆ ನಡೆಸಿದ್ದೇನೆ. ಆದರೆ, ಒಂದೇ ಒಂದು ರೂ. ಹಣ ಸಿಕ್ಕಿಲ್ಲ. ಯಾವ ಕಾಗದದಲ್ಲಾದರೂ ಹಣ ಇರುವ ಬಗ್ಗೆ ಮಾಹಿತಿ ನೀಡಿದಲ್ಲಿ ಹುಡುಕಿಸಿ ಅದನ್ನು ಅಭಿವೃದ್ಧಿಗೆ ಬಳಸಿಕೊಳ್ಳುತ್ತೇವೆ ಎಂದು ವ್ಯಂಗ್ಯವಾಡಿದರು.

ಗೋಷ್ಠಿಯಲ್ಲಿ ಸಚಿವ ಕೆ.ಸುಧಾಕರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಚಂದ್ರಪ್ಪ, ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ವಿಧಾನಪರಿಷತ್ ಸದಸ್ಯರಾದ ಮಧು ಜಿ.ಮಾದೇಗೌಡ, ದಿನೇಶ್ ಗೂಳಿಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದಡದಪುರ ಶಿವಣ್ಣ, ಪ್ರಚಾರ ಸಮಿತಿ ಅಧ್ಯಕ್ಷ ಡಾ.ಹೆಚ್.ಕೃಷ್ಣ, ವಿಜಯ್ ರಾಮೇಗೌಡ, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಹೆಚ್.ಬಿ.ರಾಮು, ಬಿ.ಪ್ರಕಾಶ್, ಜಿಪಂ ಮಾಜಿ ಸದಸ್ಯ ಬಿ.ಎಲ್.ದೇವರಾಜು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮುಖಂಡರಾದ ಕೆ.ಕೆ.ರಾಧಾಕೃಷ್ಣ, ರುದ್ರಪ್ಪ, ಹಾಲಹಳ್ಳಿ ರಾಮಲಿಂಗಯ್ಯ, ಮಹಿಳಾಧ್ಯಕ್ಷೆ ಅಂಜನಾ, ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು ಇತರರಿದ್ದರು.

WATCH VIDEO ON YOUTUBE: ತಾಸೆಯ ಪೆಟ್ಟಿಗೆ ಭರ್ಜರಿ ಹುಲಿ ಕುಣಿತ ಮಾಡಿದ ಶಿಕ್ಷಕರು ಹಾಗೂ ಮಕ್ಕಳು!


Share News

Leave a Reply

Your email address will not be published. Required fields are marked *