Breaking News

ಇಂದಿನಿಂದ ಬೆಂಗಳೂರಿನಲ್ಲಿ ತುಳುನಾಡಿನ ಜನಪ್ರಿಯ ಕ್ರೀಡೆ ಕಂಬಳ ಆರಂಭ ; ವಿಜೇತರಿಗೆ ಬಹುಮಾನವೆಷ್ಟು?

Share News

ಬೆಂಗಳೂರು: ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಸಿಲಿಕಾನ್ ಸಿಟಿಯಲ್ಲಿ ಕಂಬಳ (Bangalore Kambala) ಆಯೋಜನೆಯಾಗಿದ್ದು, ಇಂದು ಹಾಗೂ ನಾಳೆ ನಡೆಯುತ್ತಿದೆ. ಅರಮನೆ ಮೈದಾನದಲ್ಲಿ (Palace ground) ಕರಾವಳಿಯ ಜಾನಪದ ಕ್ರೀಡೆಯನ್ನು ಕಣ್ತುಂಬಿಕೊಳ್ಳಲು ಕೌಂಟ್ ಡೌನ್ ಶುರುವಾಗಿದ್ದು, ರಾಜಧಾನಿಯ ಜನ ಜೋಡಿ ಕೋಣಗಳ ಮಿಂಚಿನ ಓಟಕ್ಕೆ ಸಾಕ್ಷಿಯಾಗಲಿದ್ದಾರೆ.

ಐತಿಹಾಸಿಕ ಕಂಬಳದ ಸೊಗಡನ್ನು ಸವಿಯಲು ಸಿಲಿಕಾನ್ ಸಿಟಿ ಜನತೆ ಕೌತುಕ ಹೊಂದಿದ್ದು, ಕಂಬಳ ಹಲವು ವಿಶೇಷಗಳೊಂದಿಗೆ ಮೇಳೈಸಲಿದೆ. ಇಂದು ಬೆಳಿಗ್ಗೆ 11ರ ಹೊತ್ತಿಗೆ ಸಭಾ ಕಾರ್ಯಕ್ರಮದೊಂದಿಗೆ ಕಂಬಳ ಆರಂಭವಾಗಲಿದೆ.

ಇಂದು ಬೆಳಿಗ್ಗೆ 10.30ರ ಹೊತ್ತಿಗೆ ಅಶ್ವಿನಿ ಪುನೀತ್ ರಾಜಕುಮಾರ್ (Ashwini puneeth rajkumar) ಅವರು ಜೋಡು ಕರೆ ಉದ್ಘಾಟನೆ ಮಾಡಲಿದ್ದಾರೆ. ಬೆಳಿಗ್ಗೆ 11ರ ಹೊತ್ತಿಗೆ ಸಭಾ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ (bs yediyurappa) ಉದ್ಘಾಟಿಸಲಿದ್ದಾರೆ. 12 ಗಂಟೆ ಹೊತ್ತಿಗೆ ಸಾಂಸ್ಕೃತಿಕ ಕಾರ್ಯಕ್ರಮ ವೇದಿಕೆಯನ್ನು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ (HD Kumaraswamy) ಉದ್ಘಾಟನೆ ಮಾಡಲಿರುವರು.

ಇದನ್ನೂ ಓದಿ: ಭಾರತ ಮೂಲದ ವಿದ್ಯಾರ್ಥಿಯನ್ನು ಅಮೇರಿಕದಲ್ಲಿ ಗುಂಡಿಟ್ಟು ಹತ್ಯೆ!

ಪೂರ್ಣ ಪ್ರಮಾಣದ ಕಂಬಳದ ಉದ್ಘಾಟನೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಂದ ಆಗಲಿದ್ದು, ಸಂಜೆ 6 ಗಂಟೆಗೆ ಮುಖ್ಯ ಸಭಾ ಕಾರ್ಯಕ್ರಮದಲ್ಲಿ ಅವರು ಚಾಲನೆ ನೀಡಲಿದ್ದಾರೆ. ಹಲವು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ವಿವಿಧ ಸೆಲೆಬ್ರಿಟಿಗಳು ಭಾಗಿಯಾಗುತ್ತಾರೆ.

ಸಿಲಿಕಾನ್ ಸಿಟಿಯಲ್ಲಿ ಮೊಟ್ಟ ಮೊದಲ ಬಾರಿಗೆ ನಡೆಯುತ್ತಿರುವ ರಾಜ- ಮಹಾರಾಜ ಕಂಬಳದಲ್ಲಿ ಮಿಂಚಿನ ಓಟದಲ್ಲಿ ಓಡಿ ಪ್ರಶಸ್ತಿ ಮುಡಿಗೇರಿಸಲು 200 ಜೋಡಿ ಕೋಣಗಳು ಸಜ್ಜಾಗಿವೆ. ನಗರದ ಅರಮನೆ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆಯುವ ಕಂಬಳಕ್ಕೆ ಸಾರ್ವಜನಿಕರಿಗೆ ಪ್ರವೇಶ ಸಂಪೂರ್ಣ ಉಚಿತವಾಗಿದೆ.

ಹೇಗೆ ಪ್ರವೇಶ?

ಅರಮನೆ ಮೈದಾನದ ಗೇಟ್ ನಂಬರ್ 1, 2, 3 ಹಾಗೂ 4ರಲ್ಲಿ ಸಾರ್ವಜನಿಕರಿಗೆ ಎಂಟ್ರಿ ನೀಡಲಾಗಿದೆ. ಯಾವುದೇ ಪಾಸ್‌ ಬೇಕಿಲ್ಲ. ವಿಐಪಿಗಳಿಗೆ ಪ್ರತ್ಯೇಕ ಪಾಸ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಫನ್ ವರ್ಲ್ಡ್‌ ಕಡೆಯಿಂದ ಪ್ರವೇಶ ಮಾಡಲು ಅವಕಾಶ ನೀಡಲಾಗಿದೆ. ಕಂಬಳ ನೋಡಲು ಜನರಿಗೆ ಗ್ಯಾಲರಿ ವ್ಯವಸ್ಥೆ ಮಾಡಲಾಗಿದ್ದು, ಏಕಕಾಲಕ್ಕೆ 6ರಿಂದ 7 ಸಾವಿರ ಜನರು ಗ್ಯಾಲರಿಯಲ್ಲಿ ಕುಳಿತುಕೊಂಡು ಕಂಬಳ ನೋಡಬಹುದು.

ಇದನ್ನೂ ಓದಿ: ಬೆಳ್ತಂಗಡಿ : ಬೈಕ್ ಸ್ಟ್ಯಾಂಡ್ ನಿಂದ ಅಪಘಾತ ; ವಿದ್ಯಾರ್ಥಿ ಸಾವು!

ಈ ಕಂಬಳದ ವಿಶೇಷತೆಯೇನು?

  • ಬೆಂಗಳೂರು ಕಂಬಳದಲ್ಲಿ 200 ಜೋಡಿ ಕೋಣಗಳು ಭಾಗಿಯಾಗುತ್ತಿವೆ. 228 ಕೋಣಗಳ ಜೋಡಿ ರಿಜಿಸ್ಟ್ರೇಷನ್ ಆಗಿದ್ದು 200 ಜೋಡಿ‌ ಫೈನಲ್‌ ಆಗಿದೆ.
  • ಬೆಂಗಳೂರು ಕಂಬಳದ ಮುಖ್ಯ ವೇದಿಕೆಗೆ ಪುನೀತ್ ರಾಜ್ ಕುಮಾರ್ ಹೆಸರು ಇಡಲಾಗಿದೆ.
  • ಕಂಬಳದ ಕರೆಗೆ ರಾಜ ಮಹಾರಾಜ ಎಂದು ಹೆಸರು ಕೊಡಲಾಗಿದೆ.
  • ಸಾಂಸ್ಕೃತಿಕ ವೇದಿಕೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿಡಲಾಗಿದೆ.
  • ಕಂಬಳದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮದ ವೈಭವವಿದ್ದು, ಕರಾವಳಿಯ ಸಾಂಪ್ರದಾಯಿಕ ಹುಲಿ ಕುಣಿತ ಕೂಡ ಇರಲಿದೆ.
  • ಸಾಮಾನ್ಯವಾಗಿ ಕಂಬಳ ಕೋಣಗಳು ಓಡುವ ಟ್ರ್ಯಾಕ್ 147 ಮೀಟರ್ ಉದ್ದ ಇರುತ್ತದೆ. ಆದರೆ ಬೆಂಗಳೂರು ಕಂಬಳದ ಟ್ರ್ಯಾಕ್ 155 ಮೀಟರ್ ಉದ್ದವಿದ್ದು, ಕಂಬಳದ ಇತಿಹಾಸದಲ್ಲಿ ಹೊಸ ಚರಿತ್ರೆ ಸೃಷ್ಟಿಸಲಿದೆ.
  • ಕಂಬಳದ ವೇಳೆ ಪ್ರಾಣಿ ರಕ್ಷಣಾ ಕಾಯ್ದೆಯನ್ನು ಅನುಸರಿಸಲಾಗುತ್ತದೆ.
  • ಆಹಾರ, ನೀರಿನ ಬಗ್ಗೆ ಕೋಣಗಳ ಮಾಲೀಕರು ವಿಶೇಷ ಕಾಳಜಿ ವಹಿಸಿದ್ದಾರೆ. ಕೋಣಗಳಿಗೆ ಬೈಹುಲ್ಲು, ಕುಡಿಯುವ ನೀರು ಊರಿನಿಂದಲೇ ತರಲಾಗುತ್ತದೆ. ಯಾಕೆಂದರೆ ಆಹಾರ ಬದಲಾದರೆ ಕೋಣಗಳ ಆರೋಗ್ಯ ಏರುಪೇರು ಆಗುವ ಸಾಧ್ಯತೆ ಇದೆ.
  • ಕಂಬಳದ ಸ್ಥಳದಲ್ಲಿ ಪಶುವೈದ್ಯರು, ನಾಟಿ ವೈದ್ಯರು ಸದಾ ಲಭ್ಯರಿದ್ದಾರೆ.

ಬಹುಮಾನಗಳೇನೇನು?

  • ಗೆದ್ದ ಕೋಣಗಳಿಗೆ ಪ್ರಥಮ ಬಹುಮಾನ 16 ಗ್ರಾಂ ಚಿನ್ನ ಹಾಗೂ 1 ಲಕ್ಷ ನಗದು
  • ಎರಡನೇ ಬಹುಮಾನ 8 ಗ್ರಾಂ ಚಿನ್ನ ಹಾಗೂ 50,000 ನಗದು
  • ಮೂರನೇ ಬಹುಮಾನ 4 ಗ್ರಾಂ ಚಿನ್ನ ಹಾಗೂ 25,000 ನಗದು ಸಿಗಲಿದೆ
  • ಕಂಬಳ ಓಡಿಸುವವರಿಗೆ ಕೂಡ ವಿಶೇಷ ಬಹುಮಾನ ಇರಲಿದೆ

ಸಾಂಸ್ಕೃತಿಕ ಕಾರ್ಯಕ್ರಮಗಳು

ಬೆಳಿಗ್ಗೆಯಿಂದ ಸಂಜೆವರೆಗೂ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮ

  • ಕರಂಗೋಲು ನೃತ್ಯ
  • ಯಕ್ಷಗಾನ
  • ಕಾಲಿವುಡ್ ಸಮಕಾಲೀನ ನೃತ್ಯ
  • ಹುಲಿ ವೇಷ
  • ಮಾಂಕಾಳಿ ನಲಿಕೆ ಇತ್ಯಾದಿ

ಟ್ರಾಫಿಕ್ ವಾರ್ಡನ್

ಏರ್ಪೋರ್ಟ್‌ನಿಂದ ಸುಮಾರು 400 ಜನರ ಟೀಮ್ ಇವತ್ತು ಟ್ರಾಫಿಕ್ ಕಂಟ್ರೋಲ್‌ನಲ್ಲಿ ಭಾಗಿಯಾಗಲಿದೆ. ಎಲ್ಲಿಯೂ ಏನೂ ಸಮಸ್ಯೆ ಆಗದ ರೀತಿಯಲ್ಲಿ ನೋಡಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ಇವರು ಸಹಾಯ ಮಾಡಲಿದ್ದಾರೆ. ಆಸ್ಪತ್ರೆ ಇನ್ನಿತರ ಅಗತ್ಯ ಟ್ರಾವೆಲ್‌ಗೆ ಅನುಕೂಲ ಆಗಲೂ ಈ ಟ್ರಾಫಿಕ್ ವಾರ್ಡನ್ ಬಳಕೆಯಾಗಲಿದ್ದಾರೆ.

WATCH VIDEO ON YOUTUBE: ಹುಟ್ಟಿ ಹರಿಯುವ ಪ್ರದೇಶದಿಂದ ಸಮುದ್ರ ಸೇರುವ ತನಕದ ಕಾವೇರಿ ನದಿಯ ಅದ್ಭುತ ದೃಶ್ಯ!


Share News

Leave a Reply

Your email address will not be published. Required fields are marked *