Breaking News

ಬಂಟ್ವಾಳ : ಬೈಕ್ ಕಳವು ಮಾಡಿಕೊಂಡು ಹೋಗುವ ವೇಳೆ ಅಪಘಾತ ; ಚಪ್ಪಲಿ ಮತ್ತು ಬೈಕ್ ಬಿಟ್ಟು ಕಳ್ಳ ಎಸ್ಕೇಪ್..!

Share News

ಬಂಟ್ವಾಳ: ಬೈಕ್ ಕಳವು ಮಾಡಿಕೊಂಡು ಹೋಗುವ ವೇಳೆ ಅಪಘಾತ ಸಂಭವಿಸಿ ಸ್ಥಳದಲ್ಲಿಯೇ ಬೈಕ್ ಬಿಟ್ಟು ಪರಾರಿಯಾದ ಘಟನೆ ಗುರುವಾರ ಸಂಜೆ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬ್ರಹ್ಮರಕೋಟ್ಲು ಎಂಬಲ್ಲಿ ನಡೆದಿದೆ.

ಇಲ್ಲಿನ‌ ತುಂಬೆ ಶಾಲಾ ಮಕ್ಕಳ ವಾಹನ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಅತೀ ವೇಗ ‌ಮತ್ತು‌ ಅಜಾಗಕರುಕತೆಯಿಂದ ಬೈಕ್ ಸವಾರ ಶಾಲಾ ವಾಹನಕ್ಕೆ ಡಿಕ್ಕಿ ಹೊಡೆದಿದ್ದು ಘಟನೆಯ ಬಳಿಕ ಬೈಕನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ವಾಮದಪದವು ಗ್ರಾಮದ ಕೊರಗಟ್ಟೆ ನಿವಾಸಿ ಬೇಬಿ ಗೌಡ ಎಂಬವರ ಸ್ಲೆಂಡರ್ ಬೈಕ್ ಇದಾಗಿದ್ದು ಕಳವಾಗಿತ್ತು. ಬೇಬಿ ಗೌಡರ ಸಂಬಂಧಿಕರೋರ್ವರು ಅನಾರೋಗ್ಯದಿಂದ ಇದ್ದು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕಾರಣ ವಾಮದಪದವಿನಿಂದ ಬಿಸಿರೋಡು ವರೆಗೆ ಬೈಕ್ ನಲ್ಲಿ ಬಂದಿದ್ದು , ಆ ಬಳಿಕ ಬಿಸಿರೋಡಿನ ಪ್ಲೈ ಓವರ್ ನ ಅಡಿ ಭಾಗದಲ್ಲಿ ಬೈಕನ್ನು ನಿಲ್ಲಿಸಿ, ಮಂಗಳೂರಿಗೆ ಬಸ್ ನಲ್ಲಿ ತೆರಳಿದ್ದರು. ಮಂಗಳೂರು ಆಸ್ಪತ್ರೆಗೆ ಭೇಟಿ ನೀಡಿ ಬಸ್ ನಲ್ಲಿ ವಾಪಸು ಆಗುತ್ತಿರುವಾಗ ಮೋಬೈಲ್ ಕರೆ ಬಂದಿದ್ದು, ನಿಮ್ಮ ಬೈಕ್ ಬ್ರಹ್ಮರಕೋಟ್ಲು ಎಂಬಲ್ಲಿ ಅಪಘಾತ ಸಂಭವಿಸಿದೆ ಎಂದು ಸಾರ್ವಜನಿಕರು ತಿಳಿಸಿದ್ದರು. ಇವರಿಗೆ ಆಶ್ಚರ್ಯ ಉಂಟಾಗಿ ,ನಾನು ಬೈಕ್ ಬಿಸಿರೋಡಿನಲ್ಲಿ ನಿಲ್ಲಿಸಿದ್ದೆ ಅಲ್ಲಿ ಹೇಗೆ ಬಂತು ಎಂದು ಪ್ರಶ್ನಿಸಿದ್ದಾರೆ.

ಬಳಿಕ ಸ್ಥಳಕ್ಕೆ ಭೇಟಿ ನೀಡಿ ನೋಡಿದಾಗ ವಿಚಾರ ಸ್ಪಷ್ಟವಾಗಿದೆ. ಯಾರೋ ಅಂದಾಜು 45 ವರ್ಷದ ವ್ಯಕ್ತಿ ಬೈಕ್ ಕಳವು ಮಾಡಿ ಕೊಂಡು ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದ್ದು ಈ ಸಂದರ್ಭ ಅಲ್ಪಸ್ವಲ್ಪ ಪ್ರಮಾಣದಲ್ಲಿ ಗಾಯಗಳಾಗಿದ್ದುವು. ನಿಂತರೆ ಅಸಲಿ ಕಥೆ ಸಾರ್ವಜನಿಕರಿಗೆ ತಿಳಿಯುತ್ತದೆ ಎಂದು ಬೈಕ್ ಕಳ್ಳ ಬೈಕ್ ಬಿಟ್ಟು ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಇನ್ನು ಓಡುವ ಭರದಲ್ಲಿ ಆತ ಚಪ್ಪಲಿ ಕೂಡ ಬಿಟ್ಟು ಹೋಗಿದ್ದಾನೆ. ಇತ್ತೀಚಿನ ದಿನಗಳಲ್ಲಿ ಬಿಸಿರೋಡಿನಿಂದ ಅನೇಕ ವಾಹನಗಳ ಕಳವು ನಡೆದಿದೆ. ಅದರಲ್ಲೂ ಬಿಸಿರೋಡಿನ ಒವರ್ ಬ್ರಿಡ್ಜ್ ನ ಅಡಿಭಾಗದಲ್ಲಿ ನಿಲ್ಲಿಸಲಾಗಿದ್ದ ಅನೇಕ ದ್ವಿಚಕ್ರ ವಾಹನಗಳ ಕಳವು ನಡೆದಿದ್ದು,ಇದರಲ್ಲಿ ‌ಕೇವಲ ಕೆಲವೇ ವಾಹನಗಳ ಪತ್ತೆಯಾಗಿದ್ದು ಬಿಟ್ಟರೆ ಉಳಿದ ವಾಹನಗಳ ಇನ್ನೂ ಕೂಡ ಪತ್ತೆಯಾಗಿಲ್ಲ. ಕಳೆದ ಎಂಟು ವರ್ಷಗಳ ಹಿಂದೆ ವಾಮದಪದವು ದೇರೊಟ್ಟು ನಿವಾಸಿ ರಮೇಶ್ ಮೂಲ್ಯ ಅವರ ಪಲ್ಸರ್ ಬೈಕ್ ಕೂಡ ಕಳವಾಗಿತ್ತು. ಆದರೆ ಈವರೆಗೆ ಪತ್ತೆಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಬಿಸಿರೋಡಿನ ಠಾಣೆಯ ಕೂಗಳತೆಯ ದೂರದಲ್ಲಿ ಈ ರೀತಿಯಲ್ಲಿ ಹಾಡುಹಗಲೇ ಕಳವು ನಡೆಯುವುದು ಕಾನೂನು ಸುವ್ಯವಸ್ಥೆಗೆ ಕೆಟ್ಟ ಹೆಸರು ತರುವಂತದ್ದು, ಹಾಗಾಗಿ ಬಿಸಿರೋಡಿನ ಹೃದಯ ಭಾಗದಲ್ಲಾದರೂ ಉತ್ತಮ ಗುಣಮಟ್ಟದ ಸಿಸಿ ಕ್ಯಾಮರಾಗಳ ಅಳವಡಿಕೆ ಆಗಬೇಕಾಗಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.


Share News

Leave a Reply

Your email address will not be published. Required fields are marked *