Breaking News

ನಟ ದರ್ಶನ್​ ಮತ್ತು ವಿನಯ್​ ಗುರೂಜಿ ವಿರುದ್ಧ ದೂರು ದಾಖಲು ;ಸೆಲೆಬ್ರಿಟಿಗಳಿಗೆ ಹೆಚ್ಚಾದ ಹುಲಿ ಹಗುರು ಪ್ರಕರಣ!

Share News

ಬೆಂಗಳೂರು: ಕುತ್ತಿಗೆಯಲ್ಲಿ ಹುಲಿಯ ಉಗುರು ಇರುವ ಲಾಕೆಟ್ ಅನ್ನು ಧರಿಸಿದ್ದ ಬಿಗ್​ಬಾಸ್​​ ಸ್ಪರ್ಧಿ ವರ್ತೂರು ಸಂತೋಷ್ ವೈಲ್ಡ್​ ಲೈಫ್ ಪ್ರೊಟೆಕ್ಷನ್ ಆಕ್ಟ್ ಅಡಿ ಬಂಧನವಾಗಿದ್ದು, ಇದೀಗ ಈ ಪ್ರಕರಣದಲ್ಲಿ ಕೆಲವು ಸೆಲೆಬ್ರೆಟಿಗಳಿಗೆ ಸಂಕಷ್ಟ ಎದುರಾಗಿದೆ.

ನಟ ದರ್ಶನ್​ ಅವರು ಕೂಡ ಹುಲಿ ಉಗುರಿನ ಲಾಕೆಟ್​ ಧರಿಸಿದ್ದಾರೆ ಎಂಬ ಆರೋಪ ಎದುರಾಗಿದೆ. ಅಲ್ಲದೇ ವಿನಯ್​ ಗುರೂಜಿ ಅವರು ಹುಲಿ ಚರ್ಮದ ಮೇಲೆ ಕುಳಿತಿದ್ದಾರೆ ಎಂದು ಆರೋಪಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸರ್ವ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರ್​ ಅವರು ಕ್ರಮ ಕೈ ಗೊಳ್ಳುವಂತೆ ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಅರಣ್ಯ ಭವನದ ಅಧಿಕಾರಿಗಳಿಗೆ ದೂರು ಸಲ್ಲಿಕೆ ಮಾಡಿದ್ದಾರೆ. ಇಂದು ರಜೆ ಇರುವ ಹಿನ್ನೆಲೆ ಪೊಲೀಸರೊಂದಿಗೆ ಮಾತುಕತೆ ನಡೆಸಿದ ಶಿವಕುಮಾರ್ ಆ ಬಳಿಕ ಮಲ್ಲೇಶ್ವರಂ ಅರಣ್ಯ ಭವನದಲ್ಲಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸುವ ಅಧಿಕಾರಿಗಳು ನಾಳೆ ಕರ್ತವ್ಯದ ಅವಧಿಯಲ್ಲಿ ಅಧಿಕಾರಿಗಳನ್ನು ಭೇಟಿಯಾಗಲು ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ದೂರುದಾರ ಶಿವಕುಮಾರ್​ ಹೇಳಿದ್ದೇನು?: ದರ್ಶನ್ ಅವರು ಅರಣ್ಯ ರಾಯಭಾರಿ ಆಗಿದ್ದಾರೆ. ಅವರಿಗೆ ಕನಿಷ್ಠ ಪ್ರಜ್ಞೆ ಇಲ್ಲವೇ? ದರ್ಶನ್ ಬಂಗಾರದ ಚೈನ್ ಹಾಕಿದ್ದಾರೆ. ಅದರಲ್ಲಿ ಹುಲಿಯ ಉಗುರು ಇದೆ. ಅವರಿಂದ ಕಾನೂನಿನ ಉಲ್ಲಂಘನೆ ಆಗಿದೆ. ವಿನಯ್ ಗುರೂಜಿ ಹುಲಿಯ ಚರ್ಮದ ಮೇಲೆ ಕೂತಿದ್ದಾರೆ. ಹುಲಿಯ ಉಗುರು ಇದ್ದ ಕಾರಣಕ್ಕೆ ವರ್ತೂರು ಸಂತೋಷ ಅವರನ್ನು ಬಂಧಿಸಿದ್ದೀರಿ. ಅದೇ ರೀತಿ ನಟ ದರ್ಶನ್, ವಿನಯ್ ಗುರೂಜಿಯನ್ನೂ ಕರೆಸಿ ವಿಚಾರಿಸಿ. ಅವರು ಧರಿಸಿದ ಹುಲಿ ಉಗುರು ಅಸಲಿಯೋ ಅಥವಾ ನಕಲಿಯೋ ಅನ್ನೋದನ್ನು ಪರಿಶೀಲನೆ ಮಾಡೋದು ಅರಣ್ಯಾಧಿಕಾರಿಗಳ ಕಾರ್ಯ ಎಂದು ಹೇಳಿದ್ದಾರೆ.

ದರ್ಶನ್​ ಹಾಗೂ ವಿನಯ್​ ಗುರೂಜಿಗೆ ಕಾನೂನಿನ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಇನ್ನೂ ಹಲವು ಸೆಲೆಬ್ರಿಟಿಗಳ ಫೋಟೋಗಳು ಕೂಡ ಹೊರಬರುವ ಸಾಧ್ಯತೆ ಕೂಡಾ ಇದೆ. ಈ ಹಿಂದೆ ದರ್ಶನ್​ ಮತ್ತು ರಾಕ್​ಲೈನ್​ ವೆಂಕಟೇಶ್​ ಅವರು ಹುಲಿ ಉಗುರಿನ ಲಾಕೆಟ್​ ಧರಿಸಿದ್ದರು. ಆ ಫೋಟೋಗಳನ್ನು ಇಟ್ಟುಕೊಂಡು ಈಗ ಸೋಶಿಯಲ್​ ಮೀಡಿಯಾದಲ್ಲಿ ಟೀಕೆ ಮಾಡಲಾಗುತ್ತಿದೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ: ಯಾವುದೇ ವನ್ಯ ಜೀವಿಗೆ ಸಂಬಂಧಿಸಿದ ವಸ್ತುಗಳು, ಅಂದರೆ ಚರ್ಮ, ಮೂಳೆ. ಕೊಂಬು, ಕೂದಲು ಇತ್ಯಾದಿ ವಸ್ತುಗಳ ಸಂಗ್ರಹ ತಪ್ಪು. ಅಂತಹ ಸಂಗ್ರಹಗಳಿದ್ದರೆ ಕೂಡಲೇ ಇಲಾಖೆಗೆ ಒಪ್ಪಿಸಬೇಕು. ಇಲ್ಲವೇ ಇಲಾಖೆಯಿಂದ ಸೂಕ್ತ ಪ್ರಮಾಣ ಪತ್ರ ಪಡೆಯಬೇಕು. ಅಕ್ರಮ ಎಂದು ಸಾಬೀತಾದರೆ 3 ರಿಂದ 7 ವರ್ಷ ಜೈಲು ಮತ್ತು ಕನಿಷ್ಠ 10000 ರೂ ದಂಡ ವಿಧಿಸುವ ಸಾಧ್ಯತೆ ಇದೆ.

ವರ್ತೂರು ಸಂತೋಷ್ ಪ್ರಕರಣ:  ಹುಲಿ ಉಗುರು ಧರಿಸಿದ ಆರೋಪಕ್ಕೆ ಸಂಬಂಧಿಸಿದಂತೆ ನಿನ್ನೆ ರಾತ್ರಿ ಸಂತೋಷ್ ಅವರನ್ನು ಬಿಗ್ ಬಾಸ್ ಮನೆಯಿಂದಲೇ ಬಂಧಿಸಲಾಗಿತ್ತು. ಅರಣ್ಯ ಅಧಿಕಾರಿಗಳು ಇಂದು ನ್ಯಾಯಾಲಯಕ್ಕೆ ಸಂತೋಷ್ ಅವರನ್ನು ಹಾಜರು ಪಡಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ 14 ದಿನಗಳ ಕಾಲ ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಿದ್ದಾರೆ.  ಹಬ್ಬದ ಹಿನ್ನೆಲೆ ಎರಡು ದಿನ ಕೋರ್ಟ್ ರಜೆ ಇದ್ದ ಕಾರಣ  ಕೋರಮಂಗಲದ ನ್ಯಾಷನಲ್ ಗೇಮ್ಸ್ ವಿಲೇಜ್ ನಲ್ಲಿರುವ ಜಡ್ಜ್‌ ನಿವಾಸಕ್ಕೆ ಕರೆದೊಯ್ದು ಸಂತೋಷ್‌ರನ್ನು ಹಾಜರು ಪಡಿಸಲಾಯ್ತು. ವಿಚಾರಣೆ ನಡೆಸಿದ ಎಸಿಜೆಎಂ ನ್ಯಾಯಧೀಶರು  ಬಳಿಕ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರಿಗೆ ಸಂಕಷ್ಟ ಎದುರಾಗಿದೆ. ಹೌದು, ಸಂತೋಷ್ ಆಪ್ತ ರಂಜಿತ್ ಹಾಗೂ ಚಿನ್ನದಂಗಡಿ ಮಾಲೀಕನಿಗೆ ನೋಟಿಸ್ ಜಾರಿ ಮಾಡಲಾಗಿದೆ.


Share News

Leave a Reply

Your email address will not be published. Required fields are marked *